ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯ

ಕೊಪ್ಪಳ: ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆರು ಜಿಲ್ಲೆಗಳ ಪೈಕಿ ಅಧಿಕ ಅನುದಾನವನ್ನು ಕೊಪ್ಪಳ ಜಿಲ್ಲೆಗೆ ನೀಡಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಹೇಳಿದರು.
ಅವರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸೋಮವಾರ ಕೊಪ್ಪಳ ಜಿಲ್ಲೆಯ ಕೋವಿಡ್-೧೯ರ ನಿರ್ವಹಣೆ ಹಾಗೂ ಕೆ.ಕೆ.ಆರ್.ಡಿ.ಬಿ. ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಸಂಬಂಧಿಸಿದ ಹಾಗೇ ಕಲಬುರಗಿಗೆ ೬ ಕೋಟಿ ಕೊಟ್ಟಿದ್ದೇವೆ. ಆದರೆ ಕೊಪ್ಪಳಕ್ಕೆ ೨೨ ಕೋಟಿ ಕೊಟ್ಟಿದ್ದೇವೆ. ಹಾಗಾಗಿ ನಮಗೆ ಕೊಪ್ಪಳ ಬೇರೆ ಅಲ್ಲ. ಕಲಬುರಗಿ ಬೇರೆ ಅಲ್ಲ. ವಿಮಾನ ನಿಲ್ದಾಣಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ. ನೀವು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕೋವಿಡ್ ಮೂರನೇ ಅಲೆಗೆ ಈಗಿನಿಂದಲೇ ಪೂರ್ವ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗೆ ಸೂಚಿಸಿದರು.
ಪೆಡಿಯಾಟ್ರಿಕ್ ತಂಡ ರಚಿಸಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ಕೇಳಿ, ನಾವೂ ಕೊಡುತ್ತೇವೆ. ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ೫೦ ವೆಂಟಿಲೇಟರ್ ತೆಗೆದುಕೊಳ್ಳಿ. ಏನೂ ತೊಂದರೆ ಇಲ್ಲ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೇವಲ ಕೆ.ಕೆ.ಆರ್.ಡಿ.ಬಿ ಅನುದಾನದಿಂದಲೇ ಮಾಡಬೇಕು ಎನ್ನುವುದು ಬೇಡ. ಎಲ್ಲವನ್ನೂ ಕಲ್ಯಾಣ ಕರ್ನಾಟಕ ಮಂಡಳಿ ಮಾಡಬೇಕು ಎಂದರೆ ಇಲಾಖೆಗಳು ಯಾಕೆ ಬೇಕು ಎಂದರು.
ಸೋಷಿಯಲ್ ಮತ್ತು ನಾನ್ ಸೋಷಿಯಲ್ ಎಂದು ಇದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆದರೆ ಹಿಂದೆ ಈ ಕಾನೂನುಗಳನ್ನು ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ. ಅದನ್ನು ಶೀಘ್ರವಾಗಿ ಮಾಡುತ್ತೇವೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಇಲಾಖೆಯ ೪೧ ಕಾಮಗಾರಿಗಳು ಬಾಕಿ ಇದ್ದು, ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಲ್ಯಾಂಡ್ ಆರ್ಮಿಯವರಹ ೧೪ ಕಾಮಗಾರಿಗಳು ಬಾಕಿ ಇದ್ದು, ಒಂದು ತಿಂಗಳೊಳಗೆ ಪೂರ್ಣ ಗೊಳಿಸದಿದ್ದರೆ, ಆಯಾ ಕಾಮಗಾರಿಗಳ ಹಣವನ್ನು ವಾಪಾಸ್ ಪಡೆಯುತ್ತೇವೆ. ಬೇರೆ ಬೇರೆ ಇಲಾಖೆಗಳ ಕಾಮಗಾರಿಗಳನ್ನು ಮಾಡುತ್ತಿದ್ದರೇ, ನಮ್ಮ ಕೆ.ಕೆ.ಆರ್.ಡಿ.ಬಿ ಕಾಮಗಾರಿಗಳನ್ನು ಯಾಕೆ ಮಾಡುತ್ತೀರಿ. ಒತ್ತಡವಾದರೇ ಯಾವುದಾದರೊಂದನ್ನು ಮಾಡಿ. ಇಲ್ಲವಾದರೆ ಯಾವ ಕಾಮಗಾರಿಗಳೂ ಕೂಡಾ ಮುಕ್ತಾಯಗೊಳಿಸಲು ಆಗುವುದಿಲ್ಲ ಎಂದು ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಚೆಂಜ್ ಆಫ್ ವರ್ಕ್ ಸಮಸ್ಯೆಯಾಗಿದ್ದು, ಈ ಕುರಿತು ನಾವೂ ಕೂಡಾ ಸಂಬಂಧಿಸಿದವರ ಹತ್ತಿರ ಮಾತನಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ೨೦೧೯-೨೦೨೦ರ ೨೦೦ಕ್ಕೂ ಹೆಚ್ಚು ಕಾಮಗಾರಿಗಳು ಮುಕ್ತಾಯಗೊಂಡಿಲ್ಲ. ಹಾಗಾಗಿ ಅವುಗಳನ್ನು ಬೇಗ ಮುಗಿಸಬೇಕು. ಈ ಮೂಲಕ ಕೊಟ್ಟಿರುವ ಅನುದಾನವನ್ನೂ ಮೊದಲು ಬಳಕೆ ಮಾಡಿಕೊಂಡು ಆ ನಂತರ ಹೊಸ ಅನುದಾನ ಕೇಳಿ ಎಂದು ತಿಳಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಮ್ಯಾಕ್ರೋ ಅನುದಾನದಲ್ಲಿ ನಮ್ಮ ಜಿಲ್ಲೆಗೆ ಬಹಳ ಕಡಿಮೆ ಅನುದಾನ ನೀಡಿದ್ದೀರಿ. ಕೇವಲ ೩೩ ಕೋಟಿ ನೀಡಿದ್ದೀರಿ. ಹಾಗಾಗಿ ಮುಂದಿನ ದಿನಗಳಲ್ಲಿ ಮ್ಯಾಕ್ರೋ ಅನುದಾನವನ್ನು ನಮ್ಮ ಜಿಲ್ಲೆಗೆ ಹೆಚ್ಚು ನೀಡಬೇಕು ಎಂದರು.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಮೈಕ್ರೋದಲ್ಲಿ ಇರುವುದನ್ನು ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗೆ ಬಳಕೆ ಮಾಡಬೇಡಿ. ನಮ್ಮ ದುಡ್ಡು ನಮ್ಮ ಬಳಿಯೇ ಇರಬೇಕು ಎಂದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ, ಸ್ಟೋರೆಜ್ ಕೆಪ್ಯಾಟಿಸಿ ಕಡಿಮೆ ಇದೆ. ಲಿಕ್ವಿಡ್ ಮೆಡಿಸಿನ್ ಸ್ಟೋರೇಜ್ ಗೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಆಕ್ಸಿಜನ್ ಸ್ಟೋರೇಜ್ ಗಾಗಿ ವಿವಿಧ ಕಡೆಗಳಲ್ಲಿ ಪ್ಲಾಂಟ್ಗಳನ್ನು ಆರಂಭಿಸುತ್ತಿದ್ದೇವೆ. ಕೋವಿಡ್ ಗೆ ಸಂಬಂಧಿಸಿದ ಮೂರು ಮಷಿನ್ ಟೆಂಡರ್ ಕರೆದಿದ್ದೇವೆ. ಕನಕಗಿರಿ, ಯಲಬುರ್ಗಾ, ಕಾರಟಗಿಯಲ್ಲಿ ಅವುಗಳನ್ನು ಅಳವಡಿಸಿದ್ದೇವೆ. ೧೯ ಕೆಟಗರಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿದ್ದು, ಇವರೆಲ್ಲರಿಗೂ ವಾಕ್ಸಿನ್ ಹಾಕಲಾಗುತ್ತಿದೆ ಎಂದರು.
ಸಭೆಯಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!