ಎಲ್ಲಾರು ಮಾನವೀಯತೆಯಿಂದ ಕೆಲಸ ಮಾಡಿ: ಬಿ.ಸಿ. ಪಾಟೀಲ್

ಕೊಪ್ಪಳ: ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಅವರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-೧೯ ಕೇಂದ್ರಕ್ಕೆ ಗುರುವಾರ (ಏ.೨೯) ಭೇಟಿ ನೀಡಿ, ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಚಿಕಿತ್ಸಾ ಸೌಲಭ್ಯಗಳ ಕುರಿತು ಪರಿಶೀಲಿಸಿ, ನಾನೂ ಲಸಿಕೆ ಹಾಕಿಸಿಕೊಂಡಿದ್ದೇನೆ, ನೀವೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಚಿವರು ಸಾರ್ವಜನಿಕರಿಗೆ ಧೈರ್ಯ ತುಂಬಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ ಕೋವಿಡ್-೧೯ ಕೇಂದ್ರದ ಹಾಗೂ ಇರುವಂತಹ ಚಿಕಿತ್ಸಾ ಸೌಲಭ್ಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಿ, ಸದ್ಯದ ಕೋವಿಡ್-೧೯ ಪ್ರಕರಣಗಳನ್ನು ವಿವರಿಸಿದರು.
ಬಳಿಕ ಸಚಿವರು ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ರೋಗಿಗಳನ್ನು ಹೊರಗಡೆ ನಿಲ್ಲಿಸಬೇಡಿ. ರೋಗಿಗಳನ್ನು ಒಳಗಡೆ ಕರೆದುಕೊಂಡು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡಬೇಕು. ಪ್ರಸ್ತುತ ಜನರು ಭಯಭೀತರಾಗಿದ್ದು, ಮಾನವೀಯತೆಯಿಂದ ಕೆಲಸ ಮಾಡಬೇಕು. ಈ ಕುರಿತು ಸಿಬ್ಬಂದಿಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ಅವರಿಗೆ ಸೂಚನೆ ನೀಡಿದರು.
ನಂತರ ಕೋವಿಡ್-೧೯ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಹಾಕಿಕೊಳ್ಳುತ್ತಿದ್ದ ವೃದ್ಧರು, ಮಹಿಳೆಯರಿಗೆ ಧೈರ್ಯ ತುಂಬಿದ ಸಚಿವರು, ನಾನು ಎರಡು ಬಾರಿ ಲಸಿಕೆ ಹಾಕಿಸಿಕೊಂಡಿದ್ದೇನೆ. ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಏನೂ ಆಗುವುದಿಲ್ಲ, ಭಯ ಪಡಬೇಡಿ ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೋವಿಡ್-೧೯ ನಿಯಂತ್ರಣ ತಪ್ಪುತ್ತದೆ ಎನ್ನುವ ಉದ್ದೇಶಕ್ಕೆ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಕೋವಿಡ್-೧೯ನಿಂದ ಸರಪಳಿ ನಿರ್ಮಾಣಗೊಂಡಿದೆ. ಈ ಸರಪಳಿ ಮುರಿಯಲು ೧೪ ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ಕೊರತೆ ಇಲ್ಲ. ಮುಂಬರುವ ದಿನಗಳಲ್ಲಿ ಬೇಕಾಗುವ ಬೆಡ್, ವೆಂಟಿಲೇಟರ್ ಹಾಗೂ ಆಕ್ಸಿಜನ್‌ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಸವಾಲುಗಳನ್ನು ಎದುರಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸನ್ನದ್ಧರಾಗಿದ್ದೇವೆ ಎಂದರು.
ಗ್ರಾಮ ಪಂಚಾಯತಿ ಪಿಡಿಓ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರ್ದೇಶನ ನೀಡಲಾಗಿದ್ದು, ಬೆಂಗಳೂರಿನಿಂದ ಹೊಸದಾಗಿ ಗ್ರಾಮೀಣ ಪ್ರದೇಶಕ್ಕೆ ಬಂದವರಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸಿದ್ದೇವೆ. ಹೆಚ್ಚು ಕೋವಿಡ್-೧೯ ರೋಗಿಗಳು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಅವಶ್ಯಕವಿರುವ ಸೌಲಭ್ಯಗಳಿದ್ದರೆ ಮಾತ್ರ ಹೋಮ್ ಐಸೋಲೇಷನ್‌ನಲ್ಲಿರಲು ಸೂಚಿಸಬೇಕು. ಇಲ್ಲವಾದಲ್ಲಿ ಕೋವಿಡ್-೧೯ ಕೇಂದ್ರದಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದರು.
ರಾಜ್ಯ ಸರ್ಕಾರ ೧೮ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದೆ. ಇದಕ್ಕಾಗಿ ರಾಜ್ಯದಲ್ಲಿ ೨೬೦೦ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಅವಶ್ಯವಿರುವ ಕೋವಿಡ್-೧೯ ಚಿಕಿತ್ಸಾ ಸಾಮಗ್ರಿಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರಭಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ್ ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!