ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ನಿಧನ

ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್‌ರವರಿಗೆ (೪೫) ತೀವ್ರ ಹೃದಯಾಘಾತ ಸಂಭವಿಸಿ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆತರುವಾಗ ಮತ್ತೊಮ್ಮೆ ಹೃದಯಾಘಾತ ಸಂಭವಿಸಿದೆ. ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಭಿಮಾನಿಗಳಿಂದ ಪ್ರೀತಿಯಿಂದ ಅಪ್ಪು ಎಂದು ಕರೆಸಿಕೊಳ್ಳುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟ. ಪುನೀತ್ ರಾಜ್‌ಕುಮಾರ್ ನಟರಾಗಿಯಷ್ಟೇ ಅಲ್ಲದೆ ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
೧೯೭೬ ರಲ್ಲಿ ತೆರೆಕಂಡ ಡಾ.ರಾಜ್‌ಕುಮಾರ್ ಅಭಿನಯದ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಆಗ ಪುನೀತ್ ಆರು ತಿಂಗಳು ಮಗು. ನಂತರ ವಸಂತ ಗೀತ (೧೯೮೦)ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್, ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ ೧೪ ಚಿತ್ರಗಳು ಮತ್ತು ನಾಯಕ ನಟನಾಗಿ ೨೮ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಅಣ್ಣಾವ್ರ ಕುಟುಂಬದ ಕುಡಿ ಪುನೀತ್ ರಾಜ್‌ಕುಮಾರ್. ೧೯೭೫ ರ ಮಾರ್ಚ್ ೧೭ ರಂದು ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಪುನೀತ್ ರಾಜ್‌ಕುಮಾರ್ ಜನಿಸಿದರು. ಇವರ ಹಿರಿಯ ಸಹೋದರರಾದ ಶಿವರಾಜ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು.
ತಂದೆ ರಾಜ್‌ಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ, ಅವರ ಶೂಟಿಂಗ್ ಸೆಟ್‌ಗಳಿಗೆ ಭೇಟಿ ಕೊಡುತ್ತಿದ್ದ ಅಪ್ಪುಗೆ ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿಯಿತ್ತು. ಈ ಕಾರಣದಿಂದಲೇ ಬಾಲ ನಟನಾಗಿ ಚಿತ್ರರಂಗದಲ್ಲಿ ಅಳಿಸದ ಹೆಜ್ಜೆಗುರುತು ಮೂಡಿಸಿದ್ದಾರೆ.
ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನರ ಮನಗೆದ್ದಿದ್ದಾರೆ. ಪುನೀತ್ ಅವರ ಮೊದಲು ಹೆಸರು ಮಾ.ಲೋಹಿತ್.
ಪುನೀತ್ ನಟನೆಯ ೧೯೮೫ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಲಿಸುವ ಮೋಡಗಳು’ ಹಾಗೂ ‘ಎರಡು ಕನಸು’ ಚಿತ್ರಗಳಿಗಾಗಿ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ನಂತರ ಪುನೀತ್ ೨೦೦೨ರ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಅವರ ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾ ಬಾಂಡ್, ಪವರ್, ಮೌರ್ಯ, ನಮ್ಮ ಬಸವ, ಪೃಥ್ವಿ, ವಂಶಿ, ರಾಜ್, ಪರಮಾತ್ಮ, ಯಾರೇ ಕೂಗಾಡಲಿ, ನಟ ಸಾರ್ವಭೌಮ, ರಾಜಕುಮಾರ, ಅಂಜನಿಪುತ್ರ, ರಣವಿಕ್ರಮ, ದೊಡ್ಮನೆ ಹುಡುಗ, ರಾಮ್, ನಿನ್ನಿಂದಲೇ, ಮೈತ್ರಿ, ಚಕ್ರವ್ಯೂಹ, ಯುವರತ್ನ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಚಿತ್ರ ನಿರ್ಮಾಪಕರಾಗಿ‘ಕವಲುದಾರಿ’, ‘ಮಾಯಾಬಜಾರ್’, ಫ್ರೆಂಚ್ ಬಿರಿಯಾನಿ, ಲಾ, ಫ್ಯಾಮಿಲಿ ಪ್ಯಾಕ್ ಎಂಬ ಚಿತ್ರಗಳನ್ನು ಪಿಆರ್‌ಕೆ ಪ್ರೊಡಕ್ಷನ್ ಎಂಬ ತಮ್ಮ ಹೋಮ್ ಬ್ಯಾನರ್ನಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಪ್ರೊಡಕ್ಸನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿಗಳನ್ನು ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ‘ಪಿ.ಆರ್.ಕೆ ‘ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.
ಇದರ ಜೊತೆಗೆ ಪ್ರಸಿದ್ಧ ಟಿವಿ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ಶೋ ಗಳನ್ನು ನಿರೂಪಣೆ ಮಾಡಿದ್ದಾರೆ. ಚಿತ್ರನಟ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರೂ ಆಗಿದ್ದ ಪುನೀತ್ ರಾಜ್‌ಕುಮಾರ್, ನಾಯಕ ನಟರಾಗಿ ನಟಿಸಿದ್ದ ಮಿಲನ ಮತ್ತು ಜಾಕಿ ಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಉತ್ತಮ ನಟ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಅಲ್ಲದೆ, ಹುಡುಗರು, ಯಾರೇ ಕೂಗಾಡಲಿ, ರಣ ವಿಕ್ರಮ, ರಾಜಕುಮಾರ ಸಿನಿಮಾಗಳಿಗೆ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾರೊಂದಿಗೆ ಅಪಾರ ಅಭಿಮಾನಿಗಳನ್ನು ಪುನೀತ್ ಅಗಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!