ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂಪೂರ್ಣ ಸಹಕಾರ


ಕಲಬುರ್ಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಜನಧ್ವನಿ ಯಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂಪೂರ್ಣ ಸ‌ಹಕಾರ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರು ಖಚಿತ ಭರವಸೆ ನೀಡಿದ್ದಾರೆ.
ನಗರದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರೊಂದಿಗೆ ಇಂದು ಸಭೆ ನಡೆಸಿದ ಅವರು ಸಂಪಾದಕರುಗಳಿಗೆ ಖಚಿತ ಭರವಸೆಯನ್ನು ನೀಡಿದರು. ಕೋವಿಡ್ ದುಷ್ಪರಿಣಾಮದಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂಬುದು ಮನವರಿಕೆ ಆಗಿದೆ. ತಮ್ಮ ಸಂಕಷ್ಟಕ್ಕೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಸೆ.17ರಂದು ಕಲ್ಯಾಣ ಕರ್ನಾಟಕ ಪ್ರದೇಶದ ಏಳೂ ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಒಂದು ಪುಟ ಜಾಹೀರಾತು ನೀಡಲಾಗುವುದು. ಮತ್ತು ಪ್ರತಿ ತಿಂಗಳೂ ಒಂದು ಪುಟ ಜಾಹೀರಾತು ನೀಡುವ ಯೋಜನೆಗೆ ಅನುಮೋದನೆಗಾಗಿ ಸರ್ಕಾರಕ್ಕೆ ಆದಷ್ಟು ಶೀಘ್ರದಲ್ಲೇ ಪ್ರಸ್ತಾವನೆಯನ್ನು ಕೂಡಾ ಸಲ್ಲಿಸಲಾಗುವುದು. ಆರ್ಥಿಕ ಮುಗ್ಗಟ್ಟಿನಿಂದಾಗಿ ಪತ್ರಿಕೆಗಳು ಅನುಭವಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಖಂಡಿತವಾಗಿಯೂ ಸಹಾಯ ಒದಗಿಸಲಾಗುವುದು ಎಂದು ಖಚಿತವಾದ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರಚಿಸಲಾಗಿರುವ ಮತ್ತು ಈ ಕುರಿತಂತೆ ಪ್ರಾಮಾಣಿಕವಾಗಿ ಪರಿಶ್ರಮಿಸುತ್ತಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದಲೂ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರಯೋಜನ ದೊರಕಿಸಿ ಕೊಡಲು ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿದರಷ್ಷೇ ಅಲ್ಲ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಅವರಿಗೆ ಖುದ್ದು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಕಚೇರಿಗೆ ಎಲ್ಲಾ ಸಂಪಾದಕರುಗಳನ್ನು ಕರೆದೊಯ್ದು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಅಗತ್ಯ ನೆರವು ನೀಡಲು ಕೋರಿದರು. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಸೆ.17 ರಂದು ಒಂದು ಪುಟ ಜಾಹೀರಾತು ನೀಡಲು ಶಿಫಾರಸ್ಸು ಮಾಡಿದರು.
ದತ್ತಾತ್ರೇಯ ಪಾಟೀಲ್ ರೇವೂರು ಅವರ ಕಳಕಳಿಯ ಶಿಫಾರಸ್ಸು ಮತ್ತು ಸಂಪಾದಕರ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಅವರೂ ಕೂಡಾ ತಮ್ಮ ಸಂಘದಿಂದ ಸೆ.17ರಂದು ಪುಟ ಜಾಹೀರಾತು ನೀಡುವುದಾಗಿ ಭರವಸೆ ನೀಡಿದರು. ಸಂಘದಿಂದ ಇನ್ನಿತರ ಸೌಲಭ್ಯಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಒದಗಿಸಿ ಕೊಡಲು ಸೂಕ್ತ ಯೋಜನೆ ರೂಪಿಸುವುದಾಗಿ ಮತ್ತು ಪತ್ರಿಕೆಗಳ ಮುದ್ರಣ, ಪ್ರಸರಣ, ಜಾಹೀರಾತು, ಮುಂತಾದ ವಿಭಾಗಗಳಲ್ಲಿ ಗುಣಮಟ್ಟ ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧಿಕಾರಿಗಳು ಉಪಸ್ಥಿತರಿದ್ದರು.
ಏಳೂ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಎರಡೂ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಸಂಘಟನಾತ್ಮಕವಾಗಿ ಎಲ್ಲಾ ಸಂಪಾದಕರು ಒಗ್ಗಟ್ಟಿನಿಂದ ಮಾಡಿದ ಪ್ರಯತ್ನಕ್ಕೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರದ ಎರಡೂ ಸಂಸ್ಥೆಗಳಿಂದ ಪ್ರತಿಫಲ ದೊರೆಯಲಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ರೇವೂರು ಅವರಿಗೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ, ಕಾರ್ಯದರ್ಶಿಯಾದ ಭೀಮಾಶಂಕರ ತೆಗ್ಗೆಳ್ಳಿ ಮತ್ತು ಎರಡೂ ಸಂಸ್ಥೆಗಳ ಅಧಿಕಾರಿ ವರ್ಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!