ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಹಸ್ತಾಂತರ ಪ್ರಮಾಣ ಪತ್ರ ನೀಡಬೇಡಿ : ಡಿಸಿ

ಕೊಪ್ಪಳ, : ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಯಾವುದೇ ಇಲಾಖೆಯಿಂದ ಅನುಷ್ಠಾನ ಏಜೆನ್ಸಿಗೆ ಹಸ್ತಾಂತರ ಪ್ರಮಾಣ ಪತ್ರ ನೀಡಬೇಡಿ ಎಂದು ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ವಿವಿಧ ಇಲಾಖೆಗಳಿಂದ ಅನುಷ್ಠಾನ ಏಜೆನ್ಸಿಗಳಿಗೆ ನೀಡಿರುವ ಕಟ್ಟಡ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ಹೊರತು ಯಾವುದೇ ಇಲಾಖೆ ಹಸ್ತಾಂತರ ಪ್ರಮಾಣ ಪತ್ರವನ್ನು ನೀಡಬಾರದು. ಒಂದು ವೇಳೆ ಕಾಮಗಾರಿ ಅಪೂರ್ಣವಾಗಿದ್ದಲ್ಲಿ ಅಥವಾ ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಲ್ಲಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಹೇಳಿದರು.
 ಅನುಷ್ಠಾನ ಏಜೆನ್ಸಿಗಳಿಗೆ ಹಲವಾರು ವರ್ಷಗಳ ಹಿಂದೆಯೇ ಹಂಚಿಕೆ ಮಾಡಲಾದ, ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನ ಬಿಡುಗಡೆ ಮಾಡಿದ ನಂತರವೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕೆಲವು ಕಡೆಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿಯೇ ಇಲ್ಲ. ಇದಕ್ಕೆ ಸೂಕ್ತ ಕಾರಣಗಳನ್ನು 3 ದಿನಗಳೊಳಗಾಗಿ ಸಲ್ಲಿಸಬೇಕು. ಇಲಾಖೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ನಿರ್ದಿಷ್ಟ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗೆ ಸೂಕ್ತ ನಿರ್ದೇಶನ ನೀಡಬೇಕು. ನಿವೇಶನ ಗುರುತಿಸುವಿಕೆ ಸೇರಿದಂತೆ ಎಲ್ಲ ಹಂತಗಳಲ್ಲೂ ಇಲಾಖೆಗಳು ಏಜೆನ್ಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿಗದಿತ ಕಾಲವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
 ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಕಾಮಗಾರಿ ಪೂರ್ಣವಾಗುವವರೆಗೂ ಪೂರ್ಣವಾಗಿ ಬಿಡುಗಡೆ ಮಾಡದೆ, ಕಾಮಗಾರಿಗೆ ಪೂರಕವಾಗಿ ಹಂತ ಹಂತವಾಗಿ ಬಿಡುಗಡೆಗೊಳಿಸಿ, ಕಾಮಗಾರಿ ಯೋಜನೆಯಂತೆ ಪೂರ್ಣಗೊಂಡ ನಂತರ ಪೂರ್ತಿ ಹಣವನ್ನು ಬಿಡುಗಡೆ ಮಾಡಬೇಕು. ಅದಕ್ಕೂ ಮೊದಲೇ ಪೂರ್ಣ ಹಣ ಬಿಡುಗಡೆ ಮಾಡಿ, ಹಸ್ತಾಂತರ ಪ್ರಮಾಣ ಪತ್ರ ನೀಡಿದಲ್ಲಿ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡ ನಂತರವೂ ಇನ್ನೂ ನಿವೇಶನವನ್ನೇ ಗುರುತಿಸಿಲ್ಲ. ಸೂಕ್ತ ನಿವೇಶನದ ಹುಡುಕಾಟದಲ್ಲಿ ಹಾಗೂ ಪತ್ರ ವ್ಯವಹಾರಗಳಲ್ಲಿ ಸಮಯವನ್ನು ವ್ಯರ್ಥ ಮಾಡದೆ ಶೀಘ್ರ ನಿವೇಶನ ಗುರುತಿಸಿ ಅಥವಾ ಕಾಮಗಾರಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿ. ಇದುವರೆಗೂ ಆರಂಭವಾಗದ ಕಾಮಗಾರಿ ಕುರಿತು ವಸ್ತುಸ್ಥಿತಿಯನ್ನು ಸವಿವರವಾಗಿ ವರದಿ ಸಲ್ಲಿಸಿ ಎಂದು ಅವರು ಹೇಳಿದರು.
 ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿಯ ಜವಾಬ್ದಾರಿ ಜಿಲ್ಲಾ ಪಂಚಾಯತನ ಮುಖ್ಯ ಯೋಜನಾಧಿಕಾರಿಯದ್ದಾಗಿದ್ದು, ಅಧಿಕಾರಿಯು ಎಲ್ಲ ಕಟ್ಟಡ ಕಾಮಗಾರಿಗಳ ಕುರಿತು ಭೌತಿಕ, ಆರ್ಥಿಕ ಮಾಹಿತಿಯನ್ನು ಇಲಾಖೆಗಳಿಂದ ಪಡೆದು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಅವರು ಸಿಪಿಒ ಅವರಿಗೆ ಸೂಚನೆ ನೀಡಿದರು.
 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಅನುಷ್ಠಾನ ಏಜನ್ಸಿಗಳಿಂದ ಪೂರ್ಣಗೊಂಡ ಕಟ್ಟಡ ಕಾಮಗಾರಿಗಳನ್ನು ಪರಿಶೀಲಿಸಿ ಸಂಬAಧಿಸಿದ ಇಲಾಖೆಗಳು ತಮ್ಮ ಸುಪರ್ದಿಗೆ ತೆಗೆದುಕೊಂಡು, ಆ ಕಟ್ಟಡದಲ್ಲಿ ಕಾರ್ಯಾರಂಭಿಸಬೇಕು. ಉದ್ಘಾಟನೆಯನ್ನು ವಿಳಂಬ ಮಾಡದೆ ಮೇಲಧಿಕಾರಿಗಳ ಗಮನಕ್ಕೆ ತಂದು ವಿನೂತನ ಕಟ್ಟಡದಲ್ಲಿ ಕಚೇರಿ ಕೆಲಸಗಳನ್ನು ಆರಂಭಿಸಬೇಕು ಎಂದು ಹೇಳಿದರು.
 ಸಭೆಯಲ್ಲಿ ಜಿಲ್ಲಾ ಪಂಚಾಯತನ ಮುಖ್ಯ ಯೋಜನಾಧಿಕಾರಿ ಟಿ.ಕೃಷ್ಣಮೂರ್ತಿ, ನಗರಾಭಿವೃದ್ಧಿ ಕೋಶದ ಗಂಗಾಧರ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರದ ಶಶಿಧರ, ಕೆಆರ್‌ಐಡಿಎಲ್‌ನ ಚಿಂಚೋಳ್ಕರ್, ಪಿಆರ್‌ಇಡಿಯ ಬಡಿಗೇರ್, ಪಿಡಬ್ಲೂಡಿಯ ಕುಲಕರ್ಣಿ ಅವರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!