ಕೊಪ್ಪಳದ ಕಿಷ್ಕಿಂದೆಯ ಅಂಜನಾದ್ರಿ ಪರ್ವತ ಪ್ರದೇಶವೇ ಹನುಮನ ಜನ್ಮಸ್ಥಳ ಒಂದು ಸಮರ್ಥನೆ

ಹಿಂದುಗಳ ಪವಿತ್ರ ಗ್ರಂಥಗಳೆನಿಸಿರುವ ರಾಮಾಯಣ ಮತ್ತು ಮಹಾಭಾರತ ಎರಡು ಮಹಾಕಾವ್ಯಗಳು ಭಾರತದ ಅದ್ವಿತೀಯ ಗ್ರಂಥಗಳೆನಿಸಿವೆ. ಅವುಗಳಲ್ಲಿ ಕೆಲ ಪ್ರಸಂಗಳಲ್ಲಿ ಸಾಮ್ಯತೆ ಕಂಡರೂ ಈ ಎರಡೂ ಗ್ರಂಥಗಳು ವಿಭಿನ್ನ ಕಥೆಗಳನ್ನು ಹೊಂದಿವೆ. ಅವುಗಳಲ್ಲಿ ರಾಮನ ಕುರಿತಾಗಿ ಹೇಳಲಾದ ರಾಮಾಯಣ ಗ್ರಂಥ ಹೆಚ್ಚಿನ ಮಹತ್ವವನ್ನು ಪಡೆದಿದೆ. ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಅತೀ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದೆ. ಇದು ರಾಮನ ಕಥೆಯನ್ನು ಒಳಗೊಂಡ ಬೃಹತ್ ಸಂಸ್ಕೃತ ಮಹಾಕಾವ್ಯ. ಇದು ೨೪,೦೦೦ ಶ್ಲೋಕಗಳು ಮತ್ತು ಏಳು ಕಾಂಡಗಳಿಂದ ಕೂಡಿದ ಬೃಹತ್ ಗ್ರಂಥ. ಈ ಕಾವ್ಯವು ಕ್ರಿ.ಪೂ ಸುಮಾರು ೫ ರಿಂದ ೧ನೇ ಶತಮಾನದ ಕಾಲದಲ್ಲಿ ರಚಿತವಾಯಿತೆಂದು ಸಂಶೋಧನೆ ಹೇಳುತ್ತದೆ. ಈ ಕಾವ್ಯವು ದಶಾವತಾರಗಳಲ್ಲಿ ಒಬ್ಬರಾದ ಶ್ರೀರಾಮನ ಅವತಾರವನ್ನು ಒಳಗೊಂಡಿದೆ. ಈ ರಾಮಾಯಣವು ಏಳು ಕಾಂಡಗಳಲ್ಲಿ ರಚಿತವಾಗಿದ್ದು; ಶ್ರೀರಾಮನ ಜನನ, ಬಾಲ್ಯ, ಸೀತೆಯ ಸ್ವಯಂವರಗಳನ್ನು ಒಳಗೊಂಡ ಬಾಲಕಾಂಡ, ಕೈಕೆಯು ದಶರಥನಿಂದ ಪಡೆದ ವರದ ಫಲವಾಗಿ ರಾಮನನ್ನು ವನವಾಸಕ್ಕೆ ಕಳುಹಿಸುವ ಅಯೋಧ್ಯಾಕಾಂಡ, ವನವಾಸದಲ್ಲಿ ರಾಮನ ಜೀವನ ಮತ್ತು ಸೀತೆಯ ಅಪಹರಣ ಒಳಗೊಂಡ ಅರಣ್ಯಕಾಂಡ, ಸೀತೆಯನ್ನು ಅರಸುತ್ತಾ ವಾನರ ಸಾಮ್ರಾಜ್ಯ ಕಿಷ್ಕಿಂದೆಗೆ ಬಂದು ಸುಗ್ರೀವ ಮತ್ತು ಹನುಮಂತರ ಸಹಾಯ ಪಡೆಯುವ ಕಿಷ್ಕಿಂದಾಕಾಂಡ, ಹನುಮಂತನ ವಿವರದೊಂದಿಗೆ ಸಮುದ್ರ ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸೋ ಸುಂದರಕಾಂಡ, ಯುದ್ಧದಲ್ಲಿ ಶ್ರೀರಾಮನು ರಾವಣರನ್ನು ಸಂಹಾರ ಮಾಡಿ ಮರಳಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಬಂದು ಪಟ್ಟಾಭಿಷೇಕದ ಯುದ್ಧಕಾಂಡ ಮತ್ತು ಕೊನೆಯಲ್ಲಿ ಅಯೋಧ್ಯೆಯಲ್ಲಿ ಅಗಸನ ಮಾತಿನಿಂದ ನೊಂದುಕೊಂಡು ಸೀತೆಯನ್ನು ಪುನಃ ಕಾಡಿಗಟ್ಟುವ ಉತ್ತರಕಾಂಡ. ಹೀಗೆ ಏಳು ಕಾಂಡಗಳಿಂದ ಶ್ರೀ ಮಹರ್ಷಿ ವಾಲ್ಮೀಕಿಯು ರಾಮಾಯಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಉಳಿದಂತೆ ಇನ್ನೂ ಹಲವಾರು ಕವಿಗಳು ವಿಭಿನ್ನ ರೀತಿಯಲ್ಲಿ ರಾಮಾಯಣವನ್ನು ರಚಿಸಿದ್ದಾರೆ. ಇವುಗಳೆಲ್ಲವೂ ವಾಲ್ಮೀಕಿ ರಚಿಸಿದ ರಾಮಾಯಣವನ್ನೇ ಮೂಲ ಕಥೆಯನ್ನು ಇಟ್ಟುಕೊಂಡು ಕೆಲ ಬದಲಾವಣೆ ಮತ್ತು ಅನುಕೂಲಕ್ಕೆ ತಕ್ಕಂತೆ ಪಾತ್ರ, ಸನ್ನಿವೇಶ ಹಾಗೂ ಪರಿಸರಗಳನ್ನು ಆಧರಿಸಿಕೊಂಡು ರಚಿತವಾದವುಗಳು. ಅವುಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣವೇ ಬಹುದೊಡ್ಡ ಮಹಾಕಾವ್ಯವೆನಿಸಿದೆ.
ಶ್ರೀ ಮಹರ್ಷಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಕಿಷ್ಕಿಂದೆ ಮತ್ತು ಸುಂದರ ಕಾಂಡಗಳು ಕೊಪ್ಪಳದ ಪ್ರದೇಶ ಆನೆಗೊಂದಿಯ ಹತ್ತಿರವಿರುವ ಕಿಷ್ಕಿಂದೆಯ ಪರಿಸರದಲ್ಲಿ ನಡೆದ ಘಟನಾವಳಿಗಳೆಂದು ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ. ರಾವಣನು ಸೀತೆಯನ್ನು ಲಂಕೆಗೆ ಅಪಹರಿಸಿಕೊಂಡು ಹೋದಾಗ, ಶ್ರೀರಾಮನು ಸೀತೆಯನ್ನು ಅರಸುತ್ತಾ ಹೋಗುವಾಗ ಕಿಷ್ಕಿಂದೆ ಪ್ರದೇಶದಲ್ಲಿ ನೆಲೆಸಿದ್ದನೆಂದು ಪುರಾಣಗಳು ಹೇಳುತ್ತವೆ. ಆಗ ಕಿಷ್ಕಿಂದೆಯ ರಾಜನಾಗಿ ವಾಲಿ ಆಡಳಿತ ನಡೆಸುತ್ತಿರುತ್ತಾನೆ. ದುಷ್ಟನಾಗಿದ್ದ ವಾಲಿಯು ತನ್ನ ಸ್ವಂತ ಅಣ್ಣನಾದ ಸುಗ್ರೀವನಿಂದ ರಾಜ್ಯ ಕಸಿದುಕೊಂಡು, ಅವನ ಹೆಂಡತಿಯನ್ನೇ ಅಪಹರಿಸಿ ದುಷ್ಕೃತ್ಯ ಎಸಗಿರುತ್ತಾನೆ. ಸುಗ್ರೀವನ ಮಂತ್ರಿಯಾಗಿ ಹನುಮಂತ ಕಾರ್ಯನಿರ್ವಹಿಸುತ್ತಿರುತ್ತಾನೆ. ವಾಲಿಯ ಈ ದುಷ್ಕೃತ್ಯವನ್ನು ಕಂಡ ರಾಮನು ಸುಗ್ರೀವನ ಮನವಿಯ ಮೇರೆಗೆ ವಾಲಿಯನ್ನು ಸಂಹಾರ ಮಾಡಿದನು. ರಾವಣನಿಂದ ಅಪಹರಣಕ್ಕೀಡಾದ ತನ್ನ ಹೆಂಡತಿ ಸೀತೆಯನ್ನು ಮರಳಿ ತರಲು ಸಹಕಾರ ನೀಡುವಂತೆ ರಾಮನು ಸುಗ್ರೀವ ಹಾಗೂ ಅವನ ಮಂತ್ರಿಯಾಗಿದ್ದ ಹನುಮಂತನಲ್ಲಿ ನಿವೇದಿಸುತ್ತಾನೆ. ವಾಲಿ-ಸುಗ್ರೀವರ ಕದನ ಮತ್ತು ಹನುಮಂತನ ವಿವರಗಳನ್ನು ಕಿಷ್ಕಿಂದೆ ಕಾಂಡದಲ್ಲಿ ಬಹಳ ವಿವರವಾಗಿ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದಾಗಿದೆ. ಈ ಕಾಂಡಗಳಲ್ಲಿ ಬರುವ ಬಹುತೇಕ ಪ್ರಸಂಗಗಳು ಈ ಕಿಷ್ಕಿಂದೆಯ ಪರಿಸರದಲ್ಲಿ ನಡೆದವು ಎಂದು ನಂಬಲಾಗಿದೆ. ವಿಶೇಷವಾಗಿ ಸುಂದರಕಾಂಡದಲ್ಲಿಯೂ ಸಹ ಸುಗ್ರೀವನ ಮಂತ್ರಿ ಹನುಮಂತನ ಬಹುತೇಕ ವಿವರಗಳನ್ನು ಕಾಣಬಹುದಾಗಿದೆ. ಹನುಮಂತನ ಜನನ, ಬಾಲ್ಯ ಮತ್ತು ಅವನ ತಾಯಿಯ ಎಲ್ಲಾ ವರ್ಣನೆಯನ್ನು ಈ ಕಾಂಡದಲ್ಲಿ ವಾಲ್ಮೀಕಿಯು ವಿವರಿಸಿದ್ದಾನೆ.
ರಾಮಾಯಣದ ಕಿಷ್ಕಿಂದಕಾಂಡ ಮತ್ತು ಸುಂದರಕಾಂಡದಲ್ಲಿ ನಡೆದ ಎಲ್ಲಾ ಪ್ರಸಂಗಗಳು ಹಂಪಿ, ಆನೆಗೊಂದಿ, ಕಿಷ್ಕಿಂದೆಯ ಪರಿಸರದಲ್ಲಿ ನಡೆದವುಗಳೆಂದು ಇತಿಹಾಸಕಾರರು ತಿಳಿಸಿದ್ದಾರೆ. ಆನೆಗೊಂದಿ ಪಕ್ಕದಲ್ಲಿರುವ ದುರ್ಗಾದೇವಿಯ ದೇವಸ್ಥಾನವಿರುವ ಬೆಟ್ಟವೇ ವಾಲಿಪರ್ವತ ಅಥವಾ ವಾಲಿಕಿಲ್ಲಾ ಎಂದು ಕರೆಯಲಾಗುತ್ತಿದೆ. ನವಬೃಂದಾವನ ಎದುರಿಗೆ ನೈಸರ್ಗಿಕವಾಗಿ ಕಲ್ಲು-ಬಂಡೆಗಳಿಂದ ಕಟ್ಟಿದ ಕೋಟೆಯನ್ನು ಸುಗ್ರೀವನ ಹೆಂಡತಿಯಾದ ತಾರಾ ಪರ್ವತ ಎಂದು ಕರೆಯಲಾಗುತ್ತಿದೆ. ವಾಲ್ಮೀಕಿ ರಾಮಾಯಣ ಕಥೆಯಲ್ಲಿ ಬರುವ ಕೆಲ ಸ್ಥಳಗಳು ಆನೆಗೊಂದಿ, ಹಂಪೆ ಹಾಗೂ ಕಿಷ್ಕಿಂದೆ ಪರಿಸರದಲ್ಲಿರುವ ಋಷ್ಯಮುಖ ಪರ್ವತ, ಮಾತಂಗ ಪರ್ವತ, ಸುಗ್ರೀವ ಗುಹೆ, ಸೀತೆಯ ಸೆರಗು, ವಾಲಿಯನ್ನು ದಹಿಸಿದ ಸ್ಥಳ ವಾಲಿಕಾಷ್ಟ ಹೀಗೆ ಮುಂತಾದ ಸ್ಥಳಗಳು ರಾಮಾಯಣದಲ್ಲಿ ಉಲ್ಲೇಖಿತ ಪ್ರದೇಶಗಳೇ ಈ ಕಿಷ್ಕಿಂದೆಯ ಪ್ರದೇಶಗಳು ಎಂಬುದಕ್ಕೆ ಪುಷ್ಟಿ ಕೊಡುತ್ತಿವೆ.
೧೯೬೧ರಲ್ಲಿ ಕರ್ನಾಟಕದ ಪುರಾತತ್ವ ಸಂಶೋಧಕರಾದ ಡಾ.ಅ.ಸುಂದರವರು ಹಂಪಿ ಮತ್ತು ಆನೆಗುಂದಿ ಪ್ರದೇಶದಲ್ಲಿ ಅಧ್ಯಯನ ನಡೆಸಿ; ಈ ಭಾಗವೇ ವಾಲ್ಮೀಕಿ ರಾಮಾಯಣದ ಕಿಷ್ಕಿಂದೆ ಎಂದು ಶೋಧಿಸಿದ್ದಾರೆ. ಅದರಲ್ಲಿ ಉಲ್ಲೇಖಿತ ಪಂಪಾಕ್ಷೇತ್ರ ಈ ಪರಿಸರದಲ್ಲಿದೆ. ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಮರಳುವಾಗ ಈ ಪಂಪೆಯ ಮೂಲಕವೇ ಹೋದನೆಂದು ನಂಬಲಾಗಿದೆ. ಸ್ಕಂದ ಪುರಾಣದಲ್ಲಿ ಪಂಪಾದೇವಿಯ ಮಹಾತ್ಮೆಯನ್ನು ಉಲ್ಲೇಖಿಸಲಾಗಿದೆ. ತ್ರೇತ್ರಾಯುಗದಲ್ಲಿ ಪಂಪಾಂಬಿಕೆ ಮತ್ತು ವಿರುಪಾಕ್ಷರು ಇದೇ ಸ್ಥಳದಲ್ಲಿ ನೆಲೆಸಿದ್ದಾರೆಂದು ತಿಳಿದುಬರುತ್ತದೆ.
ಅಮೇರಿಕಾದ ಶಾಸನ ತಜ್ಞ ಫಿಲಿಫ್ ಲುಟೆನ್ ಡಾರ್ಫ ಅವರು ಹನುಮಂತ ಜನಿಸಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪ್ರದೇಶದಲ್ಲಿ ಎಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ದ ಲೈಫ್ ಆಫ್ ಎ ಟೆಕ್ಸ್ಟ್ ಎಂಬ ಕೃತಿಯು ಹನುಮಾನ್ಸ್ ಟೇಲ್ ಎಂಬ ಕೃತಿಗೆ ಮುನ್ನುಡಿಯಾಗಿದೆ. ಹನುಮಾನ್ಸ್ ಟೇಲ್ ಕೃತಿಯಲ್ಲಿ ಹನುಮಂತನು ಅಂಜನಾದ್ರಿಯಲ್ಲಿಯೇ ಜನಿಸಿದ್ದಾನೆಂಬ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಫಿಲಿಫ್ ಲುಟೆನ್ ಡಾರ್ಫರವರ ಎರಡು ಕೃತಿಗಳು ಸಹ ಅಂಜನಾದ್ರಿಯ ಹನುಮಂತನ ವಿವರಗಳ ಮೇಲೆ ಬೆಳಕು ಚೆಲ್ಲುವ ಸಂಶೋಧನ ಕೃತಿಗಳೆಂದರೆ ತಪ್ಪಾಗಲಾರದು.
ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತ ವಾನರರು ಕಿಷ್ಕಿಂದೆ ನಗರದವರು. ಅಂದು ಕಿಷ್ಕಿಂದೆ ವಾನರ ರಾಜ್ಯವಾಗಿತ್ತು. ಅದರಲ್ಲಿ ಹನುಮಂತನು ಒಬ್ಬ ಮಹಾನ್ ವೀರನಾಗಿದ್ದನು. ಕಿಷ್ಕಿಂದೆ ನಗರ ಮತ್ತು ಹನುಮಂತನ ವರ್ಣನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ಬಹಳಷ್ಟು ಕಾಣಬಹುದಾಗಿದೆ. ಈ ರೀತಿ ವಾನರ ರಾಜ್ಯವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾದ ಕಿಷ್ಕಿಂದೆಯ ಎಲ್ಲಾ ವರ್ಣನೆ ಕೊಪ್ಪಳ ಜಿಲ್ಲೆಯಲ್ಲಿರುವ ಕಿಷ್ಕಿಂದೆಗೆ ಬಹುತೇಕ ಹೋಲಿಕೆ ಆಗುತ್ತಿದೆ. ಹೀಗಾಗಿಯೇ ಈ ಕಿಷ್ಕಿಂದೆಯಲ್ಲಿಯೇ ಹನುಮಂತನು ಜನಿಸಿದನೆಂದು ಪುರಾಣಗಳು ಸಾರಿ-ಸಾರಿ ಹೇಳುತ್ತಿವೆ.
ವಿಜಯನಗರ ಅರಸರು ಕೂಡಾ ಈ ಕಿಷ್ಕಿಂದೆ ಪ್ರದೇಶದಲ್ಲಿಯೇ ಹನುಮಂತನು ಜನಿಸಿದ ಸ್ಥಳವೆಂದು ನಂಬಿದ್ದರು. ಆದ್ದರಿಂದಲೇ ಶ್ರೀಕೃಷ್ಣದೇವರಾಯನು ಹಂಪೆಯಲ್ಲಿ ಹನುಮಂತನ ದೇವಾಲಯವನ್ನು ಕಟ್ಟಿಸಿದ್ದನು. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಹನುಮಂತನ ಸಾಹಸಗಳನ್ನು ವಿಜಯನಗರ ಕಾಲದ ಶಿಲ್ಪಕಲೆಯಲ್ಲಿ ವಸ್ತುಗಳನ್ನಾಗಿ ಕೆತ್ತಲಾಗಿದೆ. ಹಂಪಿಯ ಪರಿಸರದಲ್ಲಿ ಹಲವಾರು ಶಾಸನಗಳು ಹನುಮಂತನ ದೇವಾಲಯಗಳನ್ನು ಉಲ್ಲೇಖಿಸುತ್ತವೆ. ಕೃಷ್ಣದೇವರಾಯನ ಆಸ್ಥಾನದಲ್ಲಿ ಪ್ರಭಾವಶಾಲಿಯಾಗಿದ್ದ ಶ್ರೀಪಾದರಾಯರು ಹಂಪೆಯ ಚಕ್ರತೀರ್ಥದ ಬಳಿ ಯಂತ್ರೋದ್ಧಾರ ಹನುಮಂತನನ್ನು ಪ್ರತಿಷ್ಠಾಪಿಸಿದ್ದಾರೆ. ಆ ದೇವಾಲಯ ಇಂದಿಗೂ ಸಹ ಪೂಜೆಗೊಳ್ಳುತ್ತಿದೆ. ಅಲ್ಲದೇ ವ್ಯಾಸರಾಜರು ವಿಜಯನಗರ ರಾಜ್ಯದ ಉದ್ದಗಲ ೭೩೨ ಹನುಮನ ಗುಡಿಗಳನ್ನು ಕಟ್ಟಿಸಿದರೆಂದು ಅನೇಕ ಕಾವ್ಯಗಳಿಂದ ತಿಳಿದು ಬರುತ್ತದೆ.
ವಾಲಿಯು ದುಂದುಬಿ ಎಂಬ ರಾಕ್ಷಸನ ತಲೆಯನ್ನು ಕತ್ತರಿಸಿ ಮಾತಂಗ ಪರ್ವತದ ಮೇಲೆ ಎಸೆದದ್ದಕ್ಕೆ, ಮಾತಂಗಮುನಿಯು ಕೋಪಗೊಂಡು ವಾಲಿಗೆ ಈ ಪರ್ವತಕ್ಕೆ ನಿರ್ಬಂಧ ಹೇರುತ್ತಾನೆ. ಈ ಕಾರಣದಿಂದ ವಾಲಿಯಿಂದ ಭಯಬೀತರಾಗಿದ್ದ ಸುಗ್ರೀವ ಮತ್ತು ಹನುಮಂತನು ಈ ಪರ್ವತದಲ್ಲಿ ಅಡಗಿಕೊಂಡಿದ್ದರೆಂದು ನಂಬಲಾಗಿದೆ. ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ತನ್ನ ಆಭರಣಗಳನ್ನು ಈ ಪರ್ವತದ ಮೇಲೆ ಬೀಳಿಸಿದಳಂತೆ. ಅವುಗಳನ್ನು ವಾನರರು ರಾಮನಿಗೆ ಮುಟ್ಟಿಸಿ ಮಾಹಿತಿ ಕೊಟ್ಟರೆಂದು ಐತಿಹ್ಯವಿದೆ. ರಾವಣನು ಸೀತೆಯ ಅಪಹರಣಕ್ಕೆ ಮೊದಲು ಅವಳನ್ನು ದರದರನೆ ಎಳೆದುಕೊಂಡು ಹೋದಾಗ ಮೂಡಿದ ಅವಳ ಸೆರಗಿನ ಗುರುತೆಂದು ಇಂದಿಗೂ ಹಂಪೆಯ ಪರಿಸರದಲ್ಲಿ ಕಾಣಬಹುದಾಗಿದೆ. ಮಾತಂಗ ಪರ್ವತವನ್ನು ಕುರಿತು ಸುಮಾರು ಕ್ರಿ.ಶ. ೧೩ನೇ ಶತಮಾನದಲ್ಲಿ ಹರಿಹರ ಮತ್ತು ಲಕ್ಕಣ್ಣ ದಂಡೇಶ ಕವಿಗಳು ಹಾಡಿ ಹೊಗಳಿದ್ದಾರೆ. ಅಲ್ಲದೇ ಹಂಪೆಯ ಪರಿಸರದಲ್ಲಿನ ಅನೇಕ ಶಾಸನಗಳಲ್ಲಿ ಮಾತಂಗ ಪರ್ವತದ ಬಗ್ಗೆ ಉಲ್ಲೇಖಗಳನ್ನು ಕಾಣಬಹುದಾಗಿದೆ.
ಶ್ರೀ ಮಹರ್ಷಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದಲ್ಲಿ ಕಿಷ್ಕಿಂದೆಯನ್ನು ಕುರಿತು ಒಂದು ಕಾಂಡವೇ ರಚಿತವಾಗಿರುವುದು ನಿರ್ವಿವಾದ. ರಾಮಾಯಣದಲ್ಲಿ ಉಲ್ಲೇಖಿತ ಕಿಷ್ಕಿಂದೆಯ ಪರಿಸರವು ಕೊಪ್ಪಳ ಜಿಲ್ಲೆಯಲ್ಲಿ ಇರುವ ಕಿಷ್ಕಿಂದೆಯ ಪರಿಸರಕ್ಕೆ ಹೋಲಿಕೆಯಾಗುತ್ತದೆ. ಇದನ್ನು ಈ ಪರಿಸರದಲ್ಲಿ ಲಭ್ಯವಾದ ಹಲವಾರು ಶಾಸನಗಳಿಂದ ತಾಳೆ ಮಾಡಬಹುದು. ಕ್ರಿ.ಶ. ೧೦೫೯ರ ವಿಪ್ರಶಾಸನದಲ್ಲಿ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನು ಬೆಣ್ಣೆಕಲ್ಲು ನೆಲೆವೀಡಿನಲ್ಲಿ ಇದ್ದಾಗ ಶಿವದೇವಾಲಯಕ್ಕೆ ದಾನ ನೀಡುತ್ತಾನೆ. ಚಳೇಶ್ವರ ದೇವರಿಗೆ ’ಚಕ್ರೇಶ್ವರ ವಿಶಾನ’ ನಿಮಿತ್ಯವಾಗಿ ಮುಸುಂದೆ ಎಂಬ ಗ್ರಾಮವನ್ನು ದಾನ ನೀಡುತ್ತಾನೆ. ಪ್ರಸ್ತುತ ಈ ಶಾಸನದಲ್ಲಿ ವಿಪ್ರನಾರಾಯಣ ಸ್ಥಳದ ವಿವರವಾದ ವರ್ಣನೆ ಇದ್ದು; ತುಂಗಭದ್ರೆಯಲ್ಲಿನ ಕಿಷ್ಕಿಂದ ಪರ್ವತದಲ್ಲಿತ್ತೆಂದು ಉಲ್ಲೇಖಿಸುತ್ತದೆ. ಅಲ್ಲದೇ ಈ ಪರ್ವತದಲ್ಲಿ ಯತಿಗಳು ವಾಸಿಸುತ್ತಿದ್ದರೆಂದೂ ಕೂಡಾ ಪ್ರಸ್ತುತ ಶಾಸನ ಉಲ್ಲೇಖಿಸುತ್ತದೆ. ಆ ಯತಿಗಳು ಯಾರು ಇರಬಹುದೆಂಬ ಬಗ್ಗೆ ಶಾಸನದಲ್ಲಿ ಉಲ್ಲೇಖವಿಲ್ಲ. ಆದರೆ ಬೆಳಗಾವಿ ಜಿಲ್ಲೆಯ ಸಿರಸಂಗಿ ಗ್ರಾಮದಲ್ಲಿ ದೊರೆತ ಕ್ರಿ.ಶ. ೧೧೪೮ರ ಶಾಸನದಲ್ಲಿ ಋಷ್ಯಶೃಂಗನ ಆಶ್ರಮವು ಕುಂತಳ ದೇಶದ ಬೆಳಗೊಳನಾಡಿನ ಕಿಷ್ಕಿಂದ ಪರ್ವತದ ಬಳಿ ಇತ್ತೆಂದು ಹೇಳಲಾಗಿದೆ. ಈ ಪರ್ವತದ ಪ್ರಸಿದ್ಧಿ ವರ್ಣಿಸುತ್ತಾ ಇಲ್ಲಿ ವಾಲಿ, ಮರುತ್ಸ, ಅಂಗದ, ದಿನೇಶ, ಮಾತಂಗ, ಹಂಸ, ಕಪಿಲ, ಶಾರ್ಗ, ಅಗಸ್ತ್ಯ, ವಿಭಾಂಡಕನ ಪುತ್ರ ಋಷ್ಯಶೃಂಗ ಮೊದಲಾದ ಯತಿಗಳಿಗೆ ಆಶ್ರಯತಾಣವಾಗಿತ್ತೆಂದು ತಿಳಿದುಬರುತ್ತದೆ.
ಕ್ರಿ.ಶ ೧೦೮೮ರ ಶಾಸನದಲ್ಲಿ ಆರನೇ ವಿಕ್ರಾಮಾಧಿತ್ಯನು ಕಲ್ಯಾಣದ ನೆಲೆವೀಡುವಿನಿಂದ ಆಳುತ್ತಿದ್ದಾಗ ಭಟ್ಟೋಪಾಧ್ಯಾಯನ ಮಗ ಚೌವೇದಿಭಟ್ಟನು ಹುಲಿಗೆ ಎಂಬ ಪುರದಲ್ಲಿ ತುಂಗಭದ್ರ ನದಿಯಿಂದ ಸೇಳುನಾಲೆಯೊಂದನ್ನು ಕಟ್ಟಿಸಿದಂತೆ ತಿಳಿಸುತ್ತದೆ. ಈ ಊರಿನ ಪೂರ್ವಕ್ಕೆ ರಿಷ್ಯಮೂಕಾಚಲ, ದಕ್ಷಿಣಕ್ಕೆ ಗಂಧಮಾದನ, ಪಶ್ಚಿಮಕ್ಕೆ ತ್ರಿಕೂಟ, ಉತ್ತರಕ್ಕೆ ಕಿಷ್ಕಿಂದ ಪರ್ವತಗಳಿದ್ದವೆಂದು ಉಲ್ಲೇಖಿಸಲಾಗಿದೆ. ಚೌವೇದಿಭಟ್ಟನ ಹೆಂಡತಿ ಮಂಚಿಕಬ್ಬೆಯು ನೀತಿಯೊಳಾವರುಂಧತಿ ಪತಿವ್ರತದೊಳ್ನೆಗಳ್ದಿ ಸೀತೆಗಂ ಧಾತ್ರಿಯೋಳಗ್ಗಳಂ ಗುಣ ದೊಳೆಂಬನಿತುಂ ಪರಮಾರ್ತ್ಥಮಾ ದ್ವಿಜಜ್ಯೋತಿ ಯೆನಿಪ್ಪನೊರೊಡೆಯ ಸೋಮನ ಪತ್ನಿಯೆ ಮಂಚಿಕಬ್ಬೆಯಂ ಭೂತಳದೊಳು ಪೆಳಂ ಕಿಳುಕುಳಂ ಪೊಗಳಲು ದ್ವಿಸಹಶ್ರ ಜಿಹ್ವಮೇ ಎಂದು ಪ್ರಸ್ತುತ ಶಾಸನದಲ್ಲಿ ವರ್ಣಿಸಲಾಗಿದೆ. ಮಂಚಿಕಬ್ಬೆಯನ್ನು ಸೀತೆಯಂತೆ ಪತಿವ್ರತೆ ಎಂದು ವರ್ಣಿಸಿರುವುದರಿಂದ ರಾಮಾಯಣ ಮತ್ತು ಕಿಷ್ಕಿಂದೆಯ ನಾಡಿನ ಸಂಬಂಧವನ್ನು ಬೆಸೆಯುತ್ತದೆ.
ಆಂಜನೇಯನು ಅಂಜನಾದೇವಿ ಮತ್ತು ವಾಯುದೇವನಿಂದ ಹುಟ್ಟಿದವನು. ವಾಯುದೇವನಿಗೆ ಕೇಸರಿ ಎಂತಲೂ ಮತ್ತು ಅಂಜನಾದೇವಿಗೆ ಅಂಜನಾದ್ರಿ ಎಂತಲೂ ಕರೆಯುತ್ತಾರೆ. ಹೀಗಾಗಿ ಹನುಮಂತನನ್ನು ವಾಯುಪುತ್ರ, ಕೇಸರಿನಂದನ, ಅಂಜನಿಪುತ್ರ, ಅಂಜನಾದ್ರಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಆಂಜನೇಯನು ಹುಟ್ಟಿದ ತಕ್ಷಣವೇ ಪವಾಡಗಳನ್ನು ಮಾಡಿದನೆಂದು ಪುರಾಣಗಳು ಹೇಳುತ್ತವೆ. ಆಂಜನೇಯನು ಬಾಲಕನಿದ್ದಾಗ ಸೂರ್ಯನನ್ನು ನೋಡಿ ಆತನನ್ನು ಹಣ್ಣೆಂದು ಭ್ರಮಿಸಿ ನುಂಗಿಬಿಡುತ್ತಾನೆ. ಆಗ ಮೂರು ಲೋಕಗಳಿಗೆ ಕತ್ತಲು ಆವರಿಸುತ್ತದೆ. ಎಲ್ಲಾ ದೇವತೆಗಳು ಸೂರ್ಯನನ್ನು ಉಳಿಸಿ; ಲೋಕಗಳಿಗೆ ಬೆಳಕು ನೀಡುವಂತೆ ಇಂದ್ರನಲ್ಲಿ ಮೊರೆಯಿಡುತ್ತಾರೆ. ಆಗ ಇಂದ್ರನು ತನ್ನ ವಜ್ರಾಯುಧವನ್ನು ಹನುಮಂತನ ಮುಖದ ಮೇಲೆ ಪ್ರಯೋಗ ಮಾಡುತ್ತಾನೆ. ಆಗ ಹನುಮಂತನು ಮೂರ್ಚೆಗೊಂಡು ನೆಲಕ್ಕೆ ಬಿಳುತ್ತಾನೆ. ಆಗ ಅಲ್ಲಿಗೆ ಬಂದ ಹನುಮಂತನ ತಂದೆ ವಾಯುದೇವನು ಕೋಪಗೊಂಡು ಗಾಳಿಯನ್ನು ನಿಲ್ಲಿಸುತ್ತಾನೆ. ಬೆಳಕು ಮತ್ತು ಗಾಳಿಯಿಲ್ಲದೇ ಎಲ್ಲಾ ದೇವತೆಗಳು ಗಾಬರಿಗೊಂಡು ಬ್ರಹ್ಮನಲ್ಲಿ ಮೊರೆಯಿಡುತ್ತಾರೆ. ಆಗ ಬ್ರಹ್ಮ ಮತ್ತು ನಾರದರ ಸಲಹೆಯಂತೆ ನಾರಾಯಣನನ್ನು ಕರೆದು ಹನುಮಂತನನ್ನು ಮೂರ್ಚೆಯಿಂದ ಎಚ್ಚರಗೊಳ್ಳುವಂತೆ ಮಾಡುತ್ತಾರೆ. ಆಗ ಬೆಳಕು ಮತ್ತು ಗಾಳಿಯ ಸಂಚಾರವಾಗಿ ಲೋಕ ಬೆಳಗುವಂತಾಗುತ್ತದೆ. ಇಂದಿಗೂ ಸಹ ಅಂಜನಾ ಪರ್ವತದ ಮೇಲೆ ಸೂರ್ಯನು ಮುಳುಗುವ ಪ್ರಸಂಗವು ಮನಮೋಹಕವಾಗಿ ಕಂಡುಬರುವುದರಿಂದ ಆಂಜನೇಯನು ಸೂರ್ಯನನ್ನು ನುಂಗುವ ಸಮಯವೆಂದು ನಂಬಲಾಗಿದೆ. ಸಂಸ್ಕೃತದಲ್ಲಿ ’ಹನುಮಾನ್’ ಎಂಬ ಪದಕ್ಕೆ ಅರ್ಥವನ್ನು ಕೊಡಲಾಗಿದೆ. ’ಹನು’ ಎಂದರೆ ದವಡೆ ’ಮಾನ್’ ಎಂದರೆ ವಿರೂಪಗೊಂಡವನು ಎಂದು ಅರ್ಥ ಬರುತ್ತದೆ. ಸೂರ್ಯನನ್ನು ನುಂಗಿದಾಗ ಇಂದ್ರದೇವನು ಹನುಮಂತನ ಮುಖದ ಮೇಲೆ ವಜ್ರಾಯುಧದಿಂದ ಪ್ರಯೋಗ ಮಾಡಿಸಿಕೊಂಡಿರುವುದರಿಂದ ದವಡೆ ವಿರೂಪಗೊಂಡವ ಎಂದು ತಿಳಿದು ಬರುತ್ತದೆ.
ಗೌತಮಮುನಿ ಮತ್ತು ಅಹಲ್ಯಳಿಗೆ ಮೂರು ಜನ ಮಕ್ಕಳು. ಅದರಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು. ಆ ಹೆಣ್ಣು ಮಗಳೇ ಹನುಮಂತನ ತಾಯಿ ಅಂಜನಾದೇವಿ. ಗೌತಮಮುನಿಯು ಮಗಳಾದ ಅಂಜನಾದೇವಿಯು ವ್ಯಕ್ತಪಡಿಸಿದ ಅನುಮಾನದಂತೆ ಸೋಮಗಿರಿಯ ಸೋಮತೀರ್ಥದಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಮುಳುಗಿಸಿ ಏಳಿಸುತ್ತಾನೆ. ಆಗ ಅವರು ತನಗೆ ಹುಟ್ಟಿದ ಮಕ್ಕಳಾಗಿರದಿರುವುದರಿಂದ ಅವರುಗಳ ಮುಖ ವಿರೂಪವಾಗುತ್ತದೆ. ಹಾಗಾಗಿ ಅವರು ಇಂದ್ರ ಮತ್ತು ಸೂರ್ಯನಿಂದ ಹುಟ್ಟಿದವರೆಂದು ತನ್ನ ದಿವ್ಯಜ್ಞಾನದಿಂದ ಅರಿತ ಗೌತಮಮುನಿ ತನ್ನ ಹೆಂಡತಿ ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿ ತಪಸ್ಸಿಗೆ ತೆರಳುತ್ತಾನೆ. ಅಜ್ಞಾನದಿಂದ ಮಾಡಿದ ತಪ್ಪನ್ನು ಪ್ರಕಟಪಡಿಸಿದ ಮಗಳಾದ ಅಂಜನಾದೇವಿಗೆ ತಾಯಿ ಅಹಲ್ಯಳು ಕಪಿರೂಪವನ್ನು ಹೊಂದು ಎಂದು ಶಪಿಸುತ್ತಾಳೆ. ಅದರಂತೆ ಅಂಜನಾದೇವಿಯ ಮುಖ ವಿರೂಪವಾಗಿ ಕಪಿರೂಪವಾಗುತ್ತದೆ. ಹೀಗಾಗಿ ಗೌತಮಮುನಿಯ ಇಬ್ಬರು ಗಂಡು ಮಕ್ಕಳಾದ ವಾಲಿ, ಸುಗ್ರೀವ ಮತ್ತು ಅಂಜನಾದೇವಿ ಕಪಿರೂಪವಾಗಿ ಸೋಮಗಿರಿಯಲ್ಲಿ ವಾಸಿಸುತ್ತಾರೆ. ಆ ಸೋಮಗಿರಿಯೇ ಇಂದಿನ ಶಿವಪುರದ ಹತ್ತಿರವಿರುವ ಬೆಟ್ಟವೆಂದು ನಂಬಲಾಗಿದೆ. ಹನುಮಂತನ ತಾಯಿ ಅಂಜನಾದೇವಿಯ ಹೆಸರಿನ ಮೇಲೆ ಕಿಷ್ಕಿಂದೆ ಪ್ರದೇಶದಲ್ಲಿ ಅಂಜನಾಹಳ್ಳಿ ಮತ್ತು ಹನುಮಂತನ ಹೆಸರಿನ ಮೇಲೆ ಹನುಮನಹಳ್ಳಿ ಗ್ರಾಮಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ.
ಹನುಮಂತನು ಶ್ರೀರಾಮನಿಗೂ ಮತ್ತು ಸುಗ್ರೀವನಿಗೆ ಗೆಳೆತನ ಮಾಡಿಸಿದವನು, ವಾಲಿಯ ವದೆಯ ನಂತರ ಅವನ ಹೆಂಡತಿ ತಾರಾ ಮತ್ತು ಮಗ ಅಂಗಧನು ಶೋಕದಲ್ಲಿದ್ದಾಗ ತಾಯಿ-ಮಗನಿಗೆ ಸಾಂತ್ವನ ಹೇಳಿದವನು, ರಾವಣನಿಂದ ಅಪಹರಣಕ್ಕೊಳಗಾದ ಸೀತೆಯನ್ನು ಮರಳಿ ತರಲು ಲಂಕೆಯವರೆಗೆ ಸೇತುವೆಯನ್ನು ನಿರ್ಮಿಸಿ ಆ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದವನು, ಲಕ್ಷ್ಮಣನು ಯುದ್ಧದಲ್ಲಿ ಮೂರ್ಚೆ ಹೋದಾಗ ಸಂಜೀವಿನಿಗಾಗಿ ಪರ್ವತವನ್ನೇ ಹೊತ್ತು ತಂದು ಲಕ್ಷ್ಮಣನಿಗೆ ಮರುಜೀವ ಕೊಟ್ಟವನು, ಸೀತೆ ಮರಳಿ ವಾಲ್ಮೀಕಿಯ ಆಶ್ರಮಕ್ಕೆ ಹೋದಾಗ ಮಾರುವೇಶದಲ್ಲಿ ಸೀತೆಗೆ ಸಹಾಯ ಮಾಡಿದವನು. ಹೀಗೆ ಇಡೀ ರಾಮಾಯಣದಲ್ಲಿಯೇ ನಾಯಕನಾಗಿ ಮೆರೆದವನು ಹನುಮಂತನೆಂದರೆ ಅತೀಶಯೋಕ್ತಿಯಾಗಲಾರದು. ಏಳು ಜನ ಚಿರಂಜೀವಿಗಳಲ್ಲಿ ಆಂಜನೇಯನು ಒಬ್ಬನಾಗಿದ್ದಾನೆ. ಹೀಗಾಗಿ ಆಂಜನೇಯನು ಇನ್ನೂ ಬದುಕಿದ್ದಾನೆಂದು ನಂಬಲಾಗಿದೆ. ಕರ್ನಾಟಕದಲ್ಲಿ ಹನುಮಂತನ ದೇವಾಲಯಗಳಿಲ್ಲದ ಊರುಗಳೇ ಇಲ್ಲ ಎನ್ನುವಷ್ಟು ಭಕ್ತರನ್ನು ಕಾಣಬಹುದಾಗಿದೆ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!