ಕೊಪ್ಪಳ ಜಿಲ್ಲೆಯಾದ್ಯಂತ ಜಾತ್ರೆ, ಸಮಾರಂಭಗಳು ರದ್ದು

ಅಖಿಲ ವಾಣಿ ಸುದ್ದಿ
ಕೊಪ್ಪಳ: ಕೋವಿಡ್-೧೯ ಎರಡನೇ ಅಲೆ ಆರಂಭವಾಗಿರುವುದರಿAದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಜಾತ್ರೆ ಸೇರಿದಂತೆ ಹೆಚ್ಚು ಜನ ಸೇರುವ ಎಲ್ಲ ಸಭೆ, ಸಮಾರಂಭಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿ ಎಂದು ರಾಜ್ಯ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಎಲ್ಲರೂ ಪಾಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದರ ಅಂಗವಾಗಿ ಜಿಲ್ಲೆಯಲ್ಲಿ ಜಾತ್ರೆ, ಸಮಾರಂಭಗಳನ್ನು ರದ್ದುಗೊಳಿಸಿ. ಈ ಕುರಿತು ಜಿಲ್ಲೆಯ ಎಲ್ಲ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲು ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಅಳವಂಡಿ-ಬೆಟಗೇರಿ ಕುಡಿಯುವ ನೀರಿನ ಯೋಜನೆಯಡಿ ಅಗತ್ಯ ವಿದ್ಯುತ್ ಸಂಪರ್ಕ ಒದಗಿಸಿ ಕಾಮಗಾರಿ ಪೂರ್ಣಗೊಂಡ ನಂತರ ನೀರು ಒದಗಿಸಲು ಕ್ರಮ ಕೈಗೊಳ್ಳಿ. ಅದೇ ರೀತಿಯಾಗಿ ಸಣ್ಣ ನೀರಾವರಿ ಇಲಾಖೆಯ ಯೋಜನೆಯಲ್ಲಿ ಗುತ್ತಿಗೆದಾರರು ವಿಳಂಬ ಮಾಡಿದಲ್ಲಿ ಅಥವಾ ಕಳಪೆ ಕಾಮಗಾರಿ ಕೈಗೊಂಡಲ್ಲಿ ಅಂತವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಮುಂಡರಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪೂರ್ಣಗೊಂಡ ಹಂತಗಳ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ನೀರನ್ನು ಒದಗಿಸಿ. ಈ ಯೋಜನೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ತನಿಖೆ ಕೈಗೊಳ್ಳಲು ಲೋಕಾಯುಕ್ತಕ್ಕೆ ದೂರು ನೀಡುವಂತೆ ಈ ಹಿಂದಿನ ಕೆ.ಡಿ.ಪಿ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಅದಕ್ಕೂ ಮೊದಲು ಅಕ್ರಮಕ್ಕೆ ಸಂಬAಧಿಸಿದAತೆ ಇಲಾಖಾ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ವಿವರ ಸಹಿತ ಪತ್ರ ಬರೆದು, ಇಲಾಖಾ ವಿಚಾರಣೆಗೆ ಕ್ರಮ ಕೈಗೊಳ್ಳಿ ಎಂದು ಅವರು ಜಿ.ಪಂ. ಸಿಇಒ ಅವರಿಗೆ ಸೂಚನೆ ನೀಡಿದರು.
ಹೊಸಳ್ಳಿ ಗ್ರಾಮದಲ್ಲಿ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ಗ್ರಾಮದ ಟೀ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಗ್ರಾಮದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ದೂರು ನೀಡಿದರು. ಆದ್ದರಿಂದ ಗ್ರಾಮದ ಎಲ್ಲ ಅಂಗಡಿಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಭೇಟಿ ನೀಡಿ ಮದ್ಯವನ್ನು ವಶಗೊಳಿಸಿಕೊಂಡು ಹೋಟೆಲ್ ಮಾಲೀಕರ ವಿರುದ್ಧ ಹಾಗೂ ಬಾಟಲ್‌ಗಳ ಮೇಲೆ ಮುದ್ರಿತಗೊಂಡ ಅಂಗಡಿ ಹೆಸರಿನ ಅಧಾರದಲ್ಲಿ ಮದ್ಯವನ್ನು ಹೋಟೆಲ್‌ಗಳಿಗೆ ರಫ್ತು ಮಾಡಿದ ಮದ್ಯದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ನಗರ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತಿ ಕೆ.ಡಿ.ಪಿ ಸದಸ್ಯರಾದ ಅಮರೇಶ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!