ಕೊರೊನಾ ನಿರ್ವಹಣೆಗೆ ಸಂಘ-ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ : ಜಿಲ್ಲಾಧಿಕಾರಿ

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ ಸಕ್ರಿಯವಾಗಿರುವ ವಿವಿಧ ಸಂಘ ಸಂಸ್ಥೆಗಳು ಕೂಡ ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆ ಕುರಿತಾಗಿ ಜಿಲ್ಲೆಯ ಎಲ್ಲ ಸಕ್ರಿಯ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಿರ್ವಹಣೆಗೆ ಸರ್ಕಾರ ಎಲ್ಲ ರೀತಿಯ ನೆರವು, ಅಗತ್ಯ ಮಾರ್ಗದರ್ಶನ ನೀಡುತ್ತಿದೆ. ಅದರನ್ವಯ ಜಿಲ್ಲೆಯಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಕೋವಿಡ್ ಸೋಂಕಿತರ ಚಿಕಿತ್ಸೆ, ಆಸ್ಪತ್ರೆಗಳ ಸೌಲಭ್ಯ ಮುಂತಾದವುಗಳ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಗ್ಯೂ ಅಗತ್ಯ ಪ್ರಮಾಣದ ಮಾನವ ಸಂಪನ್ಮೂಲದ ಕೊರತೆಯಿಂದ ಮುಂದಿನ ದಿನಗಳಲ್ಲಿ ಅವ್ಯವಸ್ಥೆ ಉಂಟಾಗಬಾರದು ಎಂಬ ಮುನ್ನೆಚ್ಚರಿಕೆ ಕೈಗೊಳ್ಳುವ ಉದ್ದೇಶದಿಂದ ಸಂಘ-ಸಂಸ್ಥೆಗಳು ತಮ್ಮಲ್ಲಿ ಲಭ್ಯವಿರುವ ಸೇವಾ ಮನೋಭಾವದ ಮಾನವ ಸಂಪನ್ಮೂಲವನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಬಹುತೇಕ ಶೇ.೯೦ ರಷ್ಟು ಬೆಡ್‌ಗಳು ಭರ್ತಿಯಾಗಿವೆ. ಹಾಗೆಯೇ ಪ್ರತಿ ಗಂಟೆಗೂ ಆಸ್ಪತ್ರೆಗಳಲ್ಲಿ ಸೋಂಕಿನಿಂದ ಗುಣಮುಖರಾದವರಿಂದ ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದವರಿಂದ ಬೆಡ್‌ಗಳು ಖಾಲಿಯಾಗುತ್ತಿರುತ್ತವೆ. ಖಾಲಿಯಾಗುವ ಬೆಡ್‌ಗಳ ಮಾಹಿತಿ ಇಲ್ಲದ ಕಾರಣ ರೋಗಿಗಳಲ್ಲಿ ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ಬೆಡ್‌ಗಳಿಲ್ಲ ಎಂಬ ನಕಾರಾತ್ಮಕ ಭಾವನೆ ಮೂಡುತ್ತಿದೆ. ಆದ್ದರಿಂದ ಇಂತಹ ಸನ್ನಿವೇಶವನ್ನು ದೂರ ಮಾಡಲು ತಂತ್ರಜ್ಞಾನದ ಜ್ಞಾನವುಳ್ಳ, ಹೆಚ್ಚು ಕ್ರಿಯಾಶೀಲವಾಗಿರುವ ಮಾನವ ಸಂಪನ್ಮೂಲವನ್ನು ಎನ್‌ಜಿಒಗಳು ಒದಗಿಸಬೇಕು. ಯಾವ ಆಸ್ಪತ್ರೆಯಲ್ಲಿ ಈ ಕ್ಷಣಕ್ಕೆ ಎಷ್ಟು ಬೆಡ್‌ಗಳು ಖಾಲಿಯಾಗಿವೆ ಹಾಗೂ ಯಾವ ಕಾರಣಕ್ಕೆ ಖಾಲಿಯಾಗಿವೆ ಎಂಬ ಮಾಹಿತಿಯನ್ನು ಹಾಗೂ ರೋಗಿಯ ಆರೋಗ್ಯದ ಗಂಭೀರತೆ ಆಧಾರದಲ್ಲಿ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂಬ ಮಾಹಿತಿಯನ್ನು ರೋಗಿಗೆ ನೀಡುವುದರ ಜೊತೆಗೆ, ಶಿಫಾರಸ್ಸು ಮಾಡುವ ಆಸ್ಪತ್ರೆಗೆ ಸಂಬಂಧಿಸಿದ ರೋಗಿಗೆ ಬೆಡ್ ವ್ಯವಸ್ಥೆ ಮತ್ತು ಅಗತ್ಯ ಚಿಕಿತ್ಸೆಯ ವಿವರವನ್ನು ನೀಡಬೇಕು. ಇದಕ್ಕಾಗಿ ಕ್ರಿಯಾಶೀಲವಾಗಿರುವ ಯುವಕ/ಯುವತಿಯರನ್ನು ಎನ್‌ಜಿಒಗಳು ಒದಗಿಸಬೇಕು ಎಂದು ಅವರು ಹೇಳಿದರು.
ಅದರಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದಲ್ಲಿ ಸ್ವಚ್ಛತೆ ನಿರ್ವಹಣೆಗೂ ಸ್ವಯಂಸೇವಕರ ಅಗತ್ಯವಿದೆ. ಅವರು ಕೇವಲ ಸ್ವಚ್ಛತೆ ಮಾಡುವುದು ಮಾತ್ರವಲ್ಲದೆ ಅಲ್ಲಿ ಬರುವ ರೋಗಿಗಳಿಗೆ, ರೋಗಿಗಳ ಸಂಬಂಧಿಕರಿಗೂ ಸ್ವಚ್ಛತೆಯನ್ನು ಕಾಪಾಡಲು ಅರಿವು ಮೂಡಿಬೇಕು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ವ್ಯಕ್ತಿತ್ವವುಳ್ಳ ಸ್ವಯಂಸೇವಕರನ್ನು ಎನ್‌ಜಿಒಗಳು ಒದಗಿಸಿದಲ್ಲಿ ಇನ್ನೂ ಉತ್ತಮ ಸೇವೆಯನ್ನು ನಾವು ರೋಗಿಗಳಿಗೆ ನೀಡಬಹುದು ಎಂದು ಅವರು ತಿಳಿಸಿದರು.
ಸೋಂಕಿತರ ಪರೀಕ್ಷೆಗೆ ಮಾರಿಗಳನ್ನು ಸಂಗ್ರಹಿಸಲು, ನರ್ಸಿಂಗ್ ವಿದ್ಯಾರ್ಥಿಗಳು, ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸಲು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ತಂತ್ರಜ್ಞರು ಲಭ್ಯವಿದ್ದಲ್ಲಿ ಅಂತವರನ್ನೂ ಸಹ ಆರೋಗ್ಯ ಇಲಾಖೆಯ ಸೇವೆಗೆ ಒದಗಿಸಬೇಕು. ಈ ಸಂದರ್ಭದಲ್ಲಿ ಅಂತಹವರ ಸೇವೆ ಅಗತ್ಯವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ಗಳಿದ್ದು, ಅದರ ನಿರ್ವಹಣೆಗೆ ತಜ್ಞರನ್ನು ನಿಯೋಜಿಸಲಾಗಿದೆ. ತಜ್ಞರೊಂದಿಗೆ ಸಮನ್ವಯ ಸಾಧಿಸಿ ಆಕ್ಸಿಜನ್ ಸಿಲಿಂಡರ್‌ಗಳಲ್ಲಿ ಲಭ್ಯವಿರುವ ಆಕ್ಸಿಜನ್ ಪ್ರಮಾಣ, ಇನ್ನೂ ಅಗತ್ಯವಿರುವ ಪ್ರಮಾಣವನ್ನು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಆಗಿಂದಾಗ್ಗೆ ಮಾಹಿತಿ ನೀಡಿ, ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರ್ವಹಣೆ ಮಾಡುವ ಯುವಕರನ್ನು ಎನ್‌ಜಿಒಗಳು ಒದಗಿಸಿದಲ್ಲಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಉಳಿದಂತೆ ಸಂಘ-ಸಂಸ್ಥೆಗಳು ಖುದ್ದಾಗಿ ಗ್ರಾಮಗಳಿಗೆ ತೆರಳಿ ಮಾಸ್ಕ್, ಸ್ಯಾನಿಟೈಸರ್ ವಿತರಿಸುವುದು, ಕೋವಿಡ್ ಪರೀಕ್ಷೆಗೆ ಜನರನ್ನು ಮನವೊಲಿಸುವುದು, ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಹಾಗೂ ಲಸಿಕೆ ಕೇಂದ್ರಗಳಿಗೆ ಜನರನ್ನು ಕರೆ ತರುವ ಕಾರ್ಯವನ್ನು ಮಾಡುತ್ತಿರುವುದು ಗಮನಾರ್ಹ ಸಂಗತಿ. ಹೆಚ್ಚುವರಿಯಾಗಿ ಉಳಿದ ಗುಣಮಟ್ಟದ ಮಾಸ್ಕ್ಗಳನ್ನು ಎನ್‌ಜಿಒಗಳು ಆರೋಗ್ಯ ಇಲಾಖೆಗೆ ನೀಡಬಹುದು ಎಂದು ಅವರು ಹೇಳಿದರು.
ಯುನಿಸೆಫ್‌ನ ಜಿಲ್ಲಾ ಸಂಯೋಜಕರಾದ ಹರೀಶ್ ಜೋಗಿ ಮಾತನಾಡಿ, ವಿಕಲಚೇತನರು, ಸ್ಲಂ ನಿವಾಸಿಗಳು, ದೇವದಾಸಿ ಸಮುದಾಯವದವರು, ರಸ್ತೆ ಕೂಲಿ ಕಾರ್ಮಿಕರು, ಭಿಕ್ಷುಕರು ಮುಂತಾದವರಿಗೂ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ವಿತರಣೆಯ ಅವಶ್ಯಕತೆಯಿದ್ದು, ಸಂಘ-ಸಂಸ್ಥೆಗಳ ಗಮನಕ್ಕೆ ಬರುವವರನ್ನು ಲಸಿಕಾ ಕೇಂದ್ರಕ್ಕೆ, ಪರೀಕ್ಷಾ ಕೇಂದ್ರಕ್ಕೆ ಕರೆತಂದು ಸೌಲಭ್ಯ ಒದಗಿಸಲು ಸಹಕರಿಸಬೇಕು ಎಂದು ಹೇಳಿದರು.
ರೆಡ್‌ಕ್ರಾಸ್‌ನ ಸೋಮರೆಡ್ಡಿ ಅಳವಂಡಿ ಮಾತನಾಡಿ, ಸಂಸ್ಥೆಯಿಂದ ಪ್ಲಾಸ್ಮಾ ಸಂಗ್ರಹಣೆ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ಈಗಾಗಲೇ ಸೋಂಕಿನಿಂದ ಗುಣಮುಖರಾದವರ ಪಟ್ಟಿಯನ್ನು ಆರೋಗ್ಯ ಇಲಾಖೆ ನೀಡಿದರೆ, ಅವರು ಇರುವಲ್ಲಿ ಹೋಗಿ ದಾನಿಗಳಿಂದ ಪ್ಲಾಸ್ಮಾ ಸಂಗ್ರಹಿಸಲಾಗುವುದು. ಇದರಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ. ಆದ್ದರಿಂದ ಜಿಲ್ಲಾಡಳಿತ ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಗುಣಮುಖರಾದವರ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಪಡೆಯಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಸಂಘ-ಸಂಸ್ಥೆಗಳ ಸಮನ್ವಯ ಸಮಿತಿಯ ನೋಡಲ್ ಅಧಿಕಾರಿಯಾದ ಶರಣಬಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ಸಿಡಿಪಿಒ ರೋಹಿಣಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!