ಕೊರೊನಾ ಪ್ರಕರಣಗಳು ಹೆಚ್ಚಾದರೆ ಲಾಕ್‌ಡೌನ್ ಅನಿವಾರ್ಯ: ಸಚಿವ ಬಿ.ಸಿ.ಪಾಟೀಲ್

ಕೊಪ್ಪಳ : ಕೊರೊನಾ ಪ್ರಕರಣಗಳು ಹೀಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋದರೆ ಲಾಕ್‌ಡೌನ್ ಅನಿವಾರ್ಯವಾಗುತ್ತದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಕೋವಿಡ್-೧೯ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ಶುಕ್ರವಾರ (ಮೇ ೦೭)ರಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊಪ್ಪಳ ಜಿಲ್ಲೆ ಕುಷ್ಟಗಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ಕೋವಿಡ್ ಚಿಕಿತ್ಸಾ ಪ್ರಕ್ರಿಯೆಗಳು, ಬೆಡ್, ಆಕ್ಸಿಜನ್ ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಕುಷ್ಟಗಿ ಆಸ್ಪತ್ರೆಯು ೪೨ ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ೩೬ ಬೆಡ್‌ಗಳು ಭರ್ತಿಯಾಗಿವೆ ಹಾಗೂ ೬ ಬೆಡ್‌ಗಳು ಖಾಲಿ ಇವೆ. ಮುಂಜಾಗ್ರತಾ ಕ್ರಮವಾಗಿ ಇನ್ನೂ ೨೦ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ತಾವರಗೇರಾ ಆಸ್ಪತ್ರೆಯಲ್ಲೂ ಒಟ್ಟು ೩೦ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಕುಷ್ಟಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ರೆಮಿಡಿಸಿವರ್‌ಗಳ ಕೊರತೆ ಇಲ್ಲ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗೆ ಸದ್ಯಕ್ಕೆ ಅನಸ್ತೇಷಿಯಾ ಹಾಗೂ ಫಿಜಿಸಿಯನ್ ವೈದ್ಯ ಸಿಬ್ಬಂದಿಗಳ ಕೊರತೆಯಿದ್ದು, ಇದಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಜನರನ್ನು ರಕ್ಷಣೆ ಮಾಡುವುದರ ಜತೆಗೆ ಬಡವರಿಗೂ ಸಹಾಯ ಮಾಡಬೇಕು. ಮೊದಲನೇ ಅಲೆಗಿಂತಲೂ ಎರಡನೇ ಅಲೆಯೂ ಹೆಚ್ಚಾಗಿ ಹಬ್ಬುತ್ತಿದೆ. ಮಾಧ್ಯಮದವರು, ಸರ್ಕಾರದ ಪ್ರತಿನಿಧಿಗಳು, ಪೋಲಿಸರು ಹಾಗೂ ವೈದ್ಯರು ಎಲ್ಲರೂ ಶ್ರಮಿಸುತ್ತಿದ್ದೇವೆ. ಹಾಗಾಗಿ ಜನರು ಕೂಡಾ ಮನೆಯಲ್ಲೇ ಇದ್ದು, ಲಾಕ್‌ಡೌನ್‌ಗೆ ಸಹಕಾರ ನೀಡಬೇಕು. ಸೋಮವಾರದಿಂದ ೧೫ ದಿನಗಳವರೆಗೆ ಲಾಕ್‌ಡೌನ್ ಮಾಡಿದರೆ ಅದನ್ನು ಸ್ವಾಗತಿಸುತ್ತೇನೆ. ಎಷ್ಟೇ ಆರ್ಥಿಕ ತೊಂದರೆ ಆದರೂ ಸಹ ಜೀವಗಳನ್ನು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ., ತಹಶೀಲ್ದಾರ ಎಂ.ಸಿದ್ಧೇಶ್, ಗಂಗಾವತಿ ಡಿವೈಎಸ್‌ಪಿ ರುದ್ರೇಶ್ ಉಜ್ಜಿನಕೊಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!