ಕೋವಿಡ್ ನಿರ್ವಹಣೆಗೆ ವೈದ್ಯಕೀಯ ವಿದ್ಯಾರ್ಥಿಗಳ ಸೇವೆ ಪಡೆಯಿರಿ: ಬಿ.ಸಿ.ಪಾಟೀಲ್

ಕೊಪ್ಪಳ: ನಗರದ ಕಿಮ್ಸ್ ಮಹಾವಿದ್ಯಾಲಯದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್-೧೯ ನಿರ್ವಹಣೆ ಕಾರ್ಯಕ್ಕೆ ನಿಯೋಜಿಸಲು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಅನುಮತಿ ನೀಡಿದ್ದು, ಇನ್ನು ಮುಂದೆ ಅವರನ್ನು ಕೋವಿಡ್ ನಿರ್ವಹಣೆಗೆ ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ಪಡೆಯಿರಿ ಎಂದು ರಾಜ್ಯ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಕಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸದ್ಯಕ್ಕೆ ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲು ಮಾನವ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ವ್ಯವಸ್ಥಿತ ಕಾರ್ಯ ನಿರ್ವಹಣೆಗೆ ತರಬೇತಿ ಪಡೆದ ಕೊಪ್ಪಳ ಕಿಮ್ಸ್ ಮಹಾವಿದ್ಯಾಲಯದ ೧೪೨ ವಿದ್ಯಾರ್ಥಿಗಳನ್ನು ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಲು ಕ್ರಮ ಕೈಗೊಳ್ಳಿ. ವೈದ್ಯಕೀಯ ತರಬೇತಿ ಪಡೆದಿರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿಯೂ ಅವರು ಸಹಕಾರಿಯಾಗಲಿದ್ದಾರೆ ಎಂದು ಅವರು ಹೇಳಿದರು.
ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕು ಕೋವಿಡ್ ಆಸ್ಪತ್ರೆಗೆ ಇಂದು ಭೇಟಿ ನೀಡಿ, ಪರಿಶೀಲಿಸಲಾಗಿ ಅಗತ್ಯ ಮಾನವ ಸಂಪನ್ಮೂಲದ ಕೊರತೆಯ ನಡುವೆಯೂ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ವೈದ್ಯರು ಕೋವಿಡ್ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದಾರೆ. ಅದರಂತೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸಿ. ಕೋವಿಡ್ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕುಟುಂಬದವರೊಂದಿಗೆ ಸಂವಹನ ನಡೆಸಲು ವ್ಯವಸ್ಥೆ ಕಲ್ಪಿಸಿ. ರೋಗಿಗಳಿಗೆ ಔಷಧಿಗಳೊಂದಿಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ಆದ್ದರಿಂದ ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಕನಿಷ್ಠ ೧೦ ನಿಮಿಷಗಳ ಕಾಲ ಆಧ್ಯಾತ್ಮಿಕ ವಿಷಯಗಳು, ಮೃದು ಸಂಗೀತದಂತಹ ಧ್ವನಿಮುದ್ರಿಕೆಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಒಂದು ಸಿ.ಟಿ.ಸ್ಕಾ?ಯನ್ ಯಂತ್ರ ಕಾರ್ಯಾರಂಭಗೊಂಡಿದ್ದು, ಡಿಎಂಎಫ್ ನಿಧಿಯಲ್ಲಿ ಇನ್ನೊಂದು ಸಿ.ಟಿ. ಸ್ಕಾ?ಯನ್ ಯಂತ್ರ ಅಳವಡಿಸಲು ಕ್ರಮ ವಹಿಸಿ. ಗಿಣಿಗೇರಾ ಕೆರೆ ನಿರ್ಮಾಣ ಯೋಜನೆ, ಕೋಳೂರು ಬ್ರಿಡ್ಜ್ ದುರಸ್ಥಿ ಸೇರಿದಂತೆ ನೀರಾವರಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಎಂದು ಸಚಿವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದರಾದ ಸಂಗಣ್ಣ ಕರಡಿ ಮಾತನಾಡಿ, ಕೋವಿಡ್ ನಿಯಂತ್ರಣ ಕ್ರಮವಾಗಿ ನಗರದ ತರಕಾರಿ ಮಾರುಕಟ್ಟೆಯನ್ನು ನಗರದ ಹೊರವಲಯದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ವ್ಯಾಪಾರಸ್ಥರಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಉತ್ತಮ ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೋವಿಡ್ ನೆಗೆಟಿವ್ ವರದಿ ಪಡೆದ ರೋಗಿಗಳಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಿ. ನೆಗೆಟಿವ್ ವರದಿ ಬಂದಿದೆ ಎಂದು ಅವರ ಸಾಮಾನ್ಯ ಜ್ವರ, ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಹಾಗಾಗದಂತೆ ವೈದ್ಯರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಮಾತನಾಡಿ, ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಸ್ವಚ್ಛತೆ ಅತೀ ಮುಖ್ಯವಾಗಿದ್ದು, ಸ್ವಚ್ಛತಾ ನಿರ್ವಹಣೆಗೆ ಮೊದಲು ಆದ್ಯತೆ ನೀಡಿ. ಆಸ್ಪತ್ರೆಗೆ ಕೋವಿಡ್ ಹೊರತು ಪಡಿಸಿ ಇತರೆ ಖಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮಾನವೀಯ ದೃಷ್ಠಿಯಿಂದ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡಿ ಎಂದು ಹೇಳಿದರು.
ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ತಾಲ್ಲೂಕಿನಲ್ಲಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲು ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ ಸಿಇಒ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ., ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!