ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಒತ್ತು ನೀಡಿ: ಜಿಲ್ಲಾಧಿಕಾರಿ

ಕೊಪ್ಪಳ :ಬೈಫ್ ಸಂಸ್ಥೆ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕಿನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಆಯ್ದ ಹಲವು ಗ್ರಾಮಗಳಲ್ಲಿ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಒತ್ತು ನೀಡುವ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ತಮ್ಮ ಕಾರ್ಯ ಹೀಗೆ ಮುಂದುವರಿಯಲಿ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವರ್ಚುವಲ್ ವೇದಿಕೆ ಮುಖಾಂತರ ಬೈಫ್ ಮತ್ತು ಎಚ್.ಡಿ.ಎಫ್.ಸಿ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮಾಹಿತಿ ಪಡೆದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.
ಯಲಬುರ್ಗಾ ತಾಲ್ಲೂಕಿನ ಮುರಡಿ, ನರಸಾಪುರ, ಮಂಡಲಮರಿ, ಹುಣಶ್ಯಾಳ, ಗುನ್ನಾಳ, ಕೋಳಿಹಾಳ, ಬಿ.ಎನ್.ಹಳ್ಳಿ, ಗುತ್ತೂರು, ಮಕ್ಕಳ್ಳಿ, ತರಲಕಟ್ಟಿ ಈ ಹತ್ತು ಗ್ರಾಮಗಳಲ್ಲಿ ಸೋಲಾರ ಬೀದಿ ದೀಪ, ಕೆರೆ ಹೂಳೆತ್ತುವುದು, ದೋಬಿಘಾಟ್, ಡಿಜಿಟಲ್ ಸ್ಕೂಲ್‌ನಂತಹ ಇತರ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೀರಿ. ಇದರಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರವು ಇಗಾಗಲೇ ಜಾರಿಗೆ ತಂದಿದ್ದು, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದುಕೊಳ್ಳಿ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ ಮತ್ತು ಜಿಲ್ಲಾಡಳಿತದಿಂದಲೂ ತಮಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಎಚ್.ಡಿ.ಎಫ್.ಸಿ ಬ್ಯಾಂಕಿನವರು ನೀಡಿರುವ ಸೋಲಾರ ಬೀದಿ ದೀಪದ ಪ್ಯಾನಲ್ ಅನ್ನು ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ಬಸವರಾಜಪ್ಪ ನೆಲಜೇರಿ ಅವರಿಗೆ ಹಸ್ತಾಂತರಿಸಿದರು.
ವರ್ಚುವಲ್ ವೇದಿಕೆಯಲ್ಲಿ ಕೃಷಿ ಶಿಕ್ಷಣ ಹಾಗೂ ತರಬೇತಿ ಇಲಾಖೆಯ ಮುಖ್ಯಸ್ಥರಾದ ಡಾ.ಎಮ್.ಬಿ ಪಾಟೀಲ್. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸದಾಶಿವ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಪಶು ಸಂಗೋಪನಾ ಇಲಾಖೆಯ ಡಾ. ನಾಗರಾಜ ಮತ್ತು ಬೈಫ್ ಸಂಸ್ಥೆ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!