ಚಾಮರಾಜನಗರ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ೨೪ ಜನರ ಸಾವು: ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ

ಸಿಂಧನೂರು:ಚಾಮರಾಜನಗರ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಒಂದೇ ದಿನ ೨೪ ಕೋವಿಡ್ ಪೀಡಿತರು ಆಕ್ಸಿಜನ್ ಕೊರತೆಯಿಂದ ನರಳಿ ಸಾವಿಗೀಡಾಗಲು ರಾಜ್ಯ ಸರ್ಕಾರವೇ ನೇರ ಹೊಣೆಯೆಂದು ಆರೋಪಿಸಿ, ಪ್ರಗತಿಪರ ಸಂಘಟನೆಯಿಂದ ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಚರಿತ್ರೆಯಲ್ಲೇ ಇದು ಹೃದಯವಿದ್ರಾವಕ ಘಟನೆಯಾಗಿದ್ದು, ಸರ್ಕಾರದ ಪೈಶಾಚಿಕ ಆಡಳಿತಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಕುಮಾರ್ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ರಾಜ್ಯ ಮತ್ತು ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ ಬೆನ್ನಲ್ಲೇ, ಕೋವಿಡ್ ಪೀಡಿತರು ಆಕ್ಸಿಜನ್ ಕೊರತೆಯಿಂದ ಒದ್ದಾಡಿ ಸತ್ತಿರುವುದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಪಿಎಂ ಕೇರ್ಸ್‌ಗೆ ದೇಶದ ಜನರು ನೀಡಿದ ೬೫ ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ ಹೋಯಿತು ? ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ೩೫ ಸಾವಿರ ಕೋಟಿ ರೂಪಾಯಿ ಹಣವನ್ನು ಲಸಿಕೆಗಾಗಿಯೇ ತೆಗೆದಿಟ್ಟ ಹಣದಲ್ಲಿಯೇ ಸರಕಾರ ಸಂಪೂರ್ಣ ದೇಶದ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಹಾಕಿಸುವ ಅವಕಾಶ ಇದ್ದಾಗ್ಯೂ ಕೃತಕ ಅಭಾವ ಸೃಷ್ಟಿ ಮಾಡಲಾಗಿದೆ. ಮತ್ತು ಕಾಳಸಂತೆ ಮಾರುಕಟ್ಟೆಯಲ್ಲಿ ರೆಮ್ಡಿಸಿವಿರ್‌ನಂತಹ ಇಂಜೆಕ್ಷನ್ ಔಷಧಿಯನ್ನು ಹತ್ತಾರುಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ.ಈಗಲಾದರೂ ಎಚ್ಚೆತ್ತುಕೊಂಡು ಕೋವಿಡ್ ನಿಯಂತ್ರಣಕ್ಕೆ ಉಚಿತ ಲಸಿಕೆ ಹಾಕುವುದನ್ನು ಚುರುಕುಗೊಳಿಸಬೇಕು, ಅಗತ್ಯ ಆಕ್ಸಿಜನ್ ಪೂರೈಕೆ, ಔಷಧಿ, ವೈದ್ಯಕೀಯ ಸೌಲತ್ತುಗಳನ್ನು ಒದಗಿಸಲು ಸರಕಾರದ ಯಂತ್ರಾಂಗ ಮುಂದಾಗಬೇಕು ಎಂದು ಆಗ್ರಹಿಸಿದರು.
ನಾಗರಾಜ ಪೂಜಾರ್ ಮಾತನಾಡಿ, ಆಕ್ಸಿಜನ್ ಕೊರತೆಯಿಂದ ತಮ್ಮವರು ಆಸ್ಪತ್ರೆಯ ಬೆಡ್‌ಗಳಲ್ಲಿ ನರಳಾಡುತ್ತಿದ್ದಾರೆ ಸಹಾಯ ಮಾಡಿ ಎಂದು ಕುಟುಂಬಸ್ಥರು ದೂರವಾಣಿ ಕರೆಮಾಡಿ ಪರಿ ಪರಿ ಬೇಡಿಕೊಂಡರೂ, ಕೋವಿಡ್ ಆಸ್ಪತ್ರೆಯ ಮೇಲಧಿಕಾರಿಗಳಾಗಲಿ, ಅಲ್ಲಿನ ಜಿಲ್ಲಾಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಇನ್ನೂ ಜಿಲ್ಲಾ ಉಸ್ತುವಾರಿ ಮಂತ್ರಿ ಸುರೇಶ ಕುಮಾರ್ ಬೆಂಗಳೂರಿನಲ್ಲಿಯೇ ಕುಳಿತು ದಿವ್ಯ ನಿರ್ಲಕ್ಷ್ಯ ವಹಿಸಿದ್ದೇ ಇಷ್ಟೆಲ್ಲ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಕೋವಿಡ್ ಸಾಂಕ್ರಾಮಿಕವನ್ನು ಎಷ್ಟೊಂದು ಕೆಟ್ಟದ್ದಾಗಿ ನಿರ್ವಹಣೆ ಮಾಡುತ್ತಿದೆ ಎನ್ನುವುದಕ್ಕೆ ಚಾಮರಾಜನಗರ ಸರ್ಕಾರಿ ಕೋವಿಡ್ ಆಸ್ಪತ್ರೆಯ ಘಟನೆ ಸಾಕ್ಷಿಯಾಗಿದೆ. ಕೋವಿಡ್ ಎರಡನೇ ಅಲೆಯ ಕುರಿತು ತಜ್ಞರು ಪದೇ ಪದೇ ಎಚ್ಚರಿಕೆ ನೀಡಿದರೂ ಜಿಲ್ಲಾಡಳಿತಗಳನ್ನು ಸನ್ನದ್ಧಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲರಾಗಿದ್ದಾರೆ. ಕೋವಿಡ್ ಪೀಡಿತರು ಬೀದಿಯಲ್ಲಿ ನರಳಾಡಿ ಸಾಯುತ್ತಿರುವುದಕ್ಕೆ ಅವರಿಗೆ ಬೆಡ್, ಔಷಧ, ಐಸಿಯು, ಇಂಜೆಕ್ಷನ್, ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಕರ್ಯ ಸಿಗದಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡ ಬಿ.ಎನ್.ಯರದಿಹಾಳ ಮಾತನಾಡಿ, ರಾಜ್ಯದಲ್ಲಿ ಬೈ ಎಲೆಕ್ಷನ್ ಮುಗಿದ ನಂತರ ಸಚಿವರು, ಶಾಸಕರು ತಮ್ಮ ತಮ್ಮ ಮನೆಗಳನ್ನು ಸೇರಿ ಜನರಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಆದರೆ, ಕೋವಿಡ್ ಪೀಡಿತ ಜನರು ಆರೋಗ್ಯ ಸೌಕರ್ಯಗಳು ದೊರೆಯದೇ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಮಾಫಿಯಾ ವ್ಯಾಪಕವಾಗಿದ್ದು, ಸಾರ್ವಜನಿಕರ ಆರೋಗ್ಯ ವ್ಯವಸ್ಥೆ ಪ್ರಪಾತಕ್ಕೆ ತಲುಪಿದೆ. ದುಡ್ಡಿದ್ದವರು ಮಾತ್ರ ಬದುಕಲು ಸಾಧ್ಯ ಎನ್ನುವಂತಾಗಿದ್ದು, ರೋಗಿಗಳ ಅಗತ್ಯಕ್ಕೆ ತಕ್ಕಂತೆ ರೆಮ್ಡಿಸಿವಿರ್ ಇಂಜೆಕ್ಷನ್, ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್‌ಗಳು ಸಿಗುತ್ತಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಾರ್ವತ್ರಿಕ ಲಸಿಕೀಕರಣ ತೀವ್ರ ಮಂದಗತಿಯಲ್ಲಿ ನಡೆಯುತ್ತಿದ್ದು, ಡೋಸ್‌ಗಳ ಕೊರತೆ ಮಿತಿಮೀರಿದೆ. ಮೊದಲನೆ ಹಂತದ ಲಸಿಕೆ ಪಡೆದವರು ಎರಡನೇ ಹಂತದ ಲಸಿಕೆ ಪಡೆಯಲು ಪರದಾಡುವಂತಾಗಿದೆ. ತುರ್ತು ನಿಗಾ ಘಟಕಗಳ ವ್ಯವಸ್ಥೆ, ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆ, ಜೀವರಕ್ಷಕ ಔಷಧಗಳ ಪೂರೈಕೆ ಹಾಗೂ ಲಸಿಕೆ ನೀಡುವಿಕೆ ಯಾವ ವಿಷಯದಲ್ಲೂ ರಾಜ್ಯ ಸರಕಾರ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಹಕ್ಕೊತ್ತಾಯಗಳು:
ಚಾಮರಾಜನಗರ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ೨೪ ಕೋವಿಡ್ ಪೀಡಿತರು ಮೃತಪಟ್ಟ ಹೃದಯವಿದ್ರಾವಕ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು, ಕೋವಿಡ್‌ನಿಂದ ಆಸ್ಪತ್ರೆಯಲ್ಲಿ ಸಾವಿಗೀಡಾದ ಪ್ರತಿ ಕುಟುಂಬಕ್ಕೂ ತಲಾ ೫೦ ಲಕ್ಷ ಪರಿಹಾರ ನೀಡಬೇಕು, ರಾಜ್ಯದ ಕೋವಿಡ್ ಪೀಡಿತರ ಸಂಖ್ಯೆಗೆ ತಕ್ಕಂತೆ ರೆಮ್ಡಿಸಿವಿರ್ ಇಂಜೆಕ್ಷನ್, ಬೆಡ್, ಐಸಿಯು, ವೆಂಟಿಲೇಟರ್, ಉಚಿತ ಔಷಧ, ಆಂಬ್ಯುಲೆನ್ಸ್ ಸೇವೆ ಒದಗಿಸಬೇಕು, ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ತಡೆಯಬೇಕು, ಕೋವಿಡ್ ೧೯ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರಕಾರ ನಡೆಸಿರುವ ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ದೇಶದ ಸಮಸ್ತ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಮುದಾಯದ ದೇವೇಂದ್ರಗೌಡ, ಮಲ್ಲಿಕಾರ್ಜುನ ಹೂಗಾರ, ಮಲ್ಲಿಕಾರ್ಜುನ ಕುರುಗೋಡು, ಗಂಗಪ್ಪ, ರಾಜಶೇಖರ, ಸಬ್ಜಲಿಸಾಬ್ ಸೇರಿದಂತೆ ಇನ್ನಿತರರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!