ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸಲಹೆಗಳು

ಕೊಪ್ಪಳ : ಪ್ರಸ್ತುತ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಅನುಕೂಲವಾಗುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದೆ.
 ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮಾತ್ರ ಮೇಯಿಸಲು ಬಿಡಬೇಕು. ದಿನಕ್ಕೆ 2 ರಿಂದ 3 ಬಾರಿ ಶುದ್ಧವಾದ ನೀರನ್ನು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಾನುವಾರುಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರ ತಳಿ ರಾಸು, ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿಚೀಲವನ್ನು ನೀರಿನಲ್ಲಿ ತೋಯಿಸಿ ಮೈ ಮೇಲೆ ಹಾಕಬೇಕು.
 ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ, ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿ ಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು. ಜಮೀನು ಉಳುಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು. ಕುರಿ ಮತ್ತು ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ ಮಧ್ಯಾಹ್ನದ ಸಮಯದಲ್ಲಿ ಗಿಡದ ನೆರಳಿನಲ್ಲಿ ನಿಲ್ಲಿಸಬೇಕು. ವಲಸೆ ಕುರಿಗಳು ದೂರದ ಸ್ಥಳಗಳಿಗೆ ಹೋಗುವುದಿದ್ದರೆ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹೊಡೆದುಕೊಂಡು ಹೋಗಬೇಕು. ಕರು, ಕುರಿ, ಮೇಕೆ ಮರಿಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನು ಕುಡಿಸಬೇಕು ಹಾಗೂ ನೀರನ್ನು ಸಹ 2 ರಿಂದ 3 ಸಾರಿ ಕುಡಿಸಬೇಕು. ಹೈನುರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ಕೊಡಬೇಕು. ಕೊಟ್ಟಿಗೆಯ ಸುತ್ತಮುತ್ತ, ತೋಟ, ಹೊಲದ ಬದುಗಳಲ್ಲಿ ಮೇವಿನ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಹಾಗೂ ಪೌಷ್ಠಿಕ ಆಹಾರವಾಗಿ ಹಸಿರು ಸೊಪ್ಪು ತಿನ್ನಿಸಲು ಅನುಕೂಲವಾಗುತ್ತದೆ. ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸಬೇಕು. ಜಂತುನಾಶಕ ಔಷಧಿಯನ್ನು ವರ್ಷದಲ್ಲಿ 2 ರಿಂದ 3 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಜಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು. ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ 3 ರಿಂದ 4 ಸಾರಿ ಕುಡಿಸಬೇಕು.
 ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರಾದ ಡಾ. ಎಚ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!