ಜೊಲ್ಲೆ-ಪರಣ್ಣರ ಮೊಟ್ಟೆ ಡೀಲ್ ವಿರುದ್ಧ ಆಕ್ರೋಶ

ಕೊಪ್ಪಳ, ಜು. ೨೫: ಜಿಲ್ಲೆಯ ಶಾಸಕ ಮತ್ತು ರಾಜ್ಯದ ಮಹಿಳಾ ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾಡಿದ ಮೊಟ್ಟೆ ಹಗರಣದ ಟ್ರಯಲ್‌ನಲ್ಲಿಯೇ ಸಿಕ್ಕಿಬಿದ್ದಿದ್ದಾರೆಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಿನ್ನಾಳಿನಲ್ಲಿ ಪ್ರತಿಭಟಿಸಿದರು.
ಮೊಟ್ಟೆ ಹಿಡಿದುಕೊಂಡು ಘೋಷಣೆ ಕೂಗುತ್ತಾ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಕ್ಕಳ ಮೊಟ್ಟೆಯ ಕದಿಯುವ ಕಳ್ಳ ಸಚಿವೆ ಹಾಗೂ ಶಾಸಕರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಮೊಟ್ಟೆ ಹಂಚಿದರು. ವಿಶೇಷವೆಮದರೆ ಮೊಟ್ಟೆಯ ಮೇಲೆ ಪರಣ್ಣ ಮೊಟ್ಟೆ, ಜೊಲ್ಲೆ ಮೊಟ್ಟೆ, ಡೀಲ್ ಬಿಜೆಪಿ ಸರಕಾರ, ಬಿಜೆಪಿ ಮೊಟ್ಟೆ, ಪರ್ಸಂಟೇಜ್ ಪರಣ್ಣ ಮುಂತಾದ ಘೋಷಣೆಗಳನ್ನು ಬರೆದು ಅವುಗಳನ್ನೇ ಜನರಿಗೆ ಹಂಚಿದರು. ವಿವೇಕಾನಂದ ವೃತ್ತದಿಂದ ಬಸವಣ್ಣ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿ ಮಹಿಳಾ ಮುಖಂಡರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗಾಗಿ ಮಾಡಿರುವ ಯೋಜನೆ, ಸಣ್ಣ ಕೇವಲ ನಾಲ್ಕು ರುಪಾಯಿಗಳ ಮೊಟ್ಟೆಯಲ್ಲೂ ಕಮೀಷನ್ ಬೇಡುವ ಬಿಜೆಪಿ ಲಂಚ ಕೋರರಿಗೆ ಸಮಾಜವೇ ಧಿಕ್ಕಾರ ಹಾಕುತ್ತದೆ, ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನಿಡಬೇಕು ಎಂದು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ, ಕೊಪ್ಪಳ ಮಹಿಳಾ ಸಂಘಟನಾ ಉಸ್ತುವಾರಿ ನಾಗಮಣಿ ಜಿಂಕಲ್ ಅವರು ಒತ್ತಾಯಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕಿಶೋರಿ ಬೂದನೂರ ಅವರು ಮಾತನಾಡಿ, ಪರ್ಸಂಟೇಜ್ ಪರಣ್ಣರ ಅಕ್ರಮ ಗೊತ್ತಾದ ಮೇಲೂ ಅವರ ಬಗ್ಗೆ ಮಾತನಾಡದ, ಸಚಿವರನ್ನು ವಜಾ ಮಾಡದ ಬಿಜೆಪಿ ನೈತಿಕ ಅಧಃಪತನದ ಹಾದಿ ಪೂರ್ಣಗೊಳಿಸಿದೆ, ಅದು ಮನೆಗೆ ಹೋಗಲು ಇದು ಸಕಾಲ, ಬಿಜೆಪಿ ಒಳ್ಳೆಯದನ್ನು ಮಾಡಿದ ಉದಾಹರಣೆಗಳೇ ಇಲ್ಲ ಎಂದು ಕಿಡಿಕಾರಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಅವರು ಮಾತನಾಡಿ, ಮಹಿಳೆಯರು ಬೀದಿಗೆ ಬಂದು ಹೋರಾಡುವಂತೆ ಮಾಡಿದ ಮಹಿಳಾ ಸಚಿವೆಗೆ ತಾಯಿಯಾಗಿ ಒಂದಿಷ್ಟು ಮಮಕಾರ ಇಲ್ಲ, ಮಕ್ಕಳ ಬಗ್ಗೆ ಅದರಲ್ಲೂ ಸಂಕಷ್ಟದಲ್ಲಿರುವ ಮಕ್ಕಳ ಕುರಿತು ಏನೊಂದು ಕನಿಕರ ಇಲ್ಲ, ಇದು ದಯವೆ ಇಲ್ಲದ, ಧರ್ಮ ಗೊತ್ತಿಲ್ಲದ ಡಾಂಬಿಕ ಸರಕಾರ, ಶೋಕಿ ಪಕ್ಷ ಎಂದರು. ಸಚಿವರನ್ನು ವಜಾ ಮಾಡುವವರೆಗೆ ಬಿಡುವದಿಲ್ಲ ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಮಾತನಾಡಿ, ನೈತಿಕತೆ, ಮಾನವೀಯತೆ ಎಂಬ ಪದಗಳು ಬಿಜೆಪಿಯ ಡಿಕ್ಷನರಿಯಲ್ಲಿಯೆ ಇಲ್ಲ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಕಷ್ಟಕ್ಕೆ ಸ್ಪಂದಿಸಿ ಸಿದ್ದರಾಮಯ್ಯ ಸರಕಾರ ನಿರಂತರ ಮೊಟ್ಟೆ ಕೊಡುವ, ಹಾಲು ಕೊಡುವ, ಬೂಟು, ಬಟ್ಟೆ ಮುಂತಾದ ಯೋಜನೆ ರೂಪಿಸಿದ್ದರು, ಬಿಜೆಪಿ ಮಾತ್ರ ಕಮೀಷನ್‌ನಲ್ಲಿ ನಿರತವಾಗಿದೆ. ಜಿಲ್ಲೆಯ ಶಾಸಕ ಎಂದು ಕರೆದುಕೊಳ್ಳಲು ನಾಚಿಕೆಯಾಗುತ್ತದೆ. ಇನ್ನಾದರೂ ಜನರೇ ಇವರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ವೇಳೆ ಕಿನ್ನಾಳ ಗ್ರಾ.ಪಂ. ಮಾಜಿ ಸದಸ್ಯೆ ವಿಶಾಲಾಕ್ಷಿ ವಿರೇಶ ತಾವರಗೇರಿ, ನಮ್ಮ ಕ್ಷೇತ್ರದ ಶಾಸಕರು ಮಹಿಳೆಯರ ಮಕ್ಕಳ ಮೊಟ್ಟೆ ಕಳ್ಳತನ ಮಾಡಿ, ಇಡೀ ಕ್ಷೇತ್ರದಲ್ಲಿ ಮಾನ ಮರ್ಯಾದೆ ತೆಗೆದಿದ್ದಾರೆ ಎಂದರು. ಮುಖಂಡರಾದ ವಿಜಯಲಕ್ಷ್ಮೀ ಗುಳೇದ, ಶೀಲಾ ಹಾಲ್ಕುರಕಿ, ಚನ್ನಮ್ಮ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!