ತುರ್ತು ಸೇವೆಗಳನ್ನು ಬಿಟ್ಟು ಉಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ

ಕೊಪ್ಪಳ: ಕೋವಿಡ್-೧೯ ಎರಡನೇ ಅಲೆಯ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ಜಿಲ್ಲಾಯಾದ್ಯಂತ ಮೇ ೧೭ ರ ಬೆಳಿಗ್ಗೆ ೬ ಗಂಟೆಯಿಂದ ಮೇ ೨೧ರ ರಾತ್ರಿ ೧೨ ಗಂಟೆಯ ವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ ೩೪(ಎಂ) ಮತ್ತು ಅಪರಾಧಿಕಾ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ರಡಿಯಲ್ಲಿ ಅಗತ್ಯ ಸೇವೆಗಳು ಹಾಗೂ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆದೇಶ ಹೊರಡಿಸಿದ್ದಾರೆ.
ಆದೇಶದನ್ವಯ ಅಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಕೃಷಿ ಚಟುವಟಿಕೆಗಳು, ಅಗ್ನಿ ಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ಎ.ಟಿ.ಎಂ ಸೇವೆ, ರೈಸ್‌ಮಿಲ್‌ನಲ್ಲಿ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ನಿರ್ವಹಿಸತಕ್ಕದ್ದು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚುಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
ಆಸ್ಪತ್ರೆಗಳಿಗೆ ಹೋಗುವವರು ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ಗಳಲ್ಲಿ ತೋರಿಸತಕ್ಕದ್ದು. ದಿನ ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ಸೇವೆಗಳಿಗೆ, ಆಹಾರ ಸಂಸ್ಕರಣೆಯ ಸೇವೆಗಳಾದ ಕೋಲ್ಡ್ ಸ್ಟೋರೇಜ್‌ಗಳು, ರಾಸಾಯನಿಕ ಉದ್ಯಮಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳಲ್ಲಿ ಶೇ.೫೦ ರಷ್ಟು ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿಸಲಾಗಿದೆ.
ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ, ವಿಶೇಷವಾಗಿ ಆಮ್ಲಜನಕ ತರುವ ವಾಹನಗಳ ತಡೆ ರಹಿತ ಸಾಗಾಟವನ್ನು ಅನುಮತಿಸಲಾಗಿದೆ. ಕಂದಾಯ ಇಲಾಖೆ ( ನಾಡ ಕಚೇರಿ ಹೊರತು ಪಡಿಸಿ) , ಗ್ರಾಮೀಣಾಭಿವೃದ್ಧಿ ಇಲಾಖೆ, ನಗರ-ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಶಿಕ್ಷಣ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ ಸೇವೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಕೋವಿಡ್-೧೯ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ಉಚ್ಚ ನ್ಯಾಯಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸುವುದು.
ಸರ್ಕಾರೇತರ ಸಂಸ್ಥೆಗಳ ಕಚೇರಿಗಳು ಹಾಗೂ ಸ್ವಯಂ ಸೇವಕರು ಇತರೆ ಎಲ್ಲಾ ಕಚೇರಿಗಳು ತಮ್ಮ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸತಕ್ಕದ್ದು. ಅಂತ್ಯಕ್ರಿಯೆ/ಶವಸಂಸ್ಕಾರಕ್ಕೆ ೫ ಜನರಿಗೆ ಮಾತ್ರ ಅನುಮತಿಸಲಾಗಿದೆ. ಸರ್ಕಾರಿ ಸಾರಿಗೆ ಸೇವೆಯನ್ನು ನಿರ್ಬಂಧಿಸಲಾಗಿದೆ ಹಾಗೂ ಖಾಸಗಿ ಸಾರಿಗೆ ಸೇವೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿದ್ದು ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ಗಳಲ್ಲಿ ತೋರಿಸತಕ್ಕದ್ದು. ಇತರೆ ಎಲ್ಲಾ ಖಾಸಗಿ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ಕರ್ತವ್ಯ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!