ತೈಲ ಬೆಲೆ ಏರಿಕೆ ವಿರೋಧಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದ ಸಾಮಾನ್ಯ ಜನ ಜೀವಿಸುವದು ಕಷ್ಟವಾಗಿದೆ, ಮೋದಿ ಸಾಹೇಬರು ಸುಖವಾಗಿ ನಿದ್ರೆ ಮಾಡ್ತಾ ಬಣ್ಣದ ಮಾತನಾಡಿ ಮತದಾರರನ್ನೇ ಕೊಲ್ಲುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ, ಕೊಪ್ಪಳ ಮಹಿಳಾ ಸಂಘಟನಾ ಉಸ್ತುವಾರಿ ನಾಗಮಣಿ ಜಿಂಕಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಕಾವ್ಯಾನಂದ ಪಾರ್ಕ ಈಶ್ವರ ದೇವಸ್ಥಾನದಿಂದ ಪ್ರವಾಸಿ ಮಂದಿರದ ಹತ್ತಿರವಿರುವ ಈಶ್ವರ ದೇವಸ್ಥಾನದವರೆಗೆ ಬಂಡಿ ಮತ್ತು ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಿ ಅಶೋಕ ವೃತ್ತದಲ್ಲಿ ಮಾತನಾಡಿದರು.
ತೈಲ ಬೆಲೆ ಒಂದೇ ಅಲ್ಲದೇ ವಿಪರೀತವಾಗಿ ಎಲ್ಲವನ್ನೂ ಏರಿಸಲಾಗಿದೆ, ಇಲ್ಲದ ಸಬೂಬು ಹೇಳಿ ಜನರನ್ನು ಮರಳು ಮಾಡುವ ತಂತ್ರ ಈಗ ನಡೆಯುವದಿಲ್ಲ, ಈಗ ಏನಿದ್ದರೂ ನೇರವಾಗಿ ಮನೆ ದಾರಿ ತೋರಿಸುವದು ಮಾತ್ರ. ಅದಕ್ಕಾಗಿ ಜನರು ಚುನಾವಣೆ ಬರುವದನ್ನು ಕಾಯುತ್ತಿದ್ದಾರೆ. ಅದಕ್ಕಾಗಿಯೇ ಜಿಲ್ಲಾ ಪಂಚಾಯತಿ ಚುನಾವಣೆ ಭಯಕ್ಕಾಗಿ ಮುಂದಕ್ಕೆ ಹಾಕಿದ್ದಾರೆ ಎಂದರು.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕಿಶೋರಿ ಬೂದನೂರ ಅವರು ಮತನಾಡಿ, ಜನರಿಗೆ ಪಕ್ಷದ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಈಗಿನಿಂದಲೇ ಆರಂಭಿಸಬೇಕು, ಮುಂಬರುವ ಪಂಚಾಯತಿ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಮಾಧ್ಯಮ ಪ್ಯಾನಲಿಷ್ಟ್ ಶೈಲಜಾ ಹಿರೇಮಠ ಮಾತನಾಡಿ, ಜನರನ್ನು ಬೀದಿಗೆ ತಂದು ಅಚ್ಛೇ ದಿನ್‌ಗಳ ಕನಸು ತೋರಿಸುತ್ತಿರುವ, ಸಿನೆಮಾ ರೀಲಿಗಿಂತಲೂ ಉದ್ದವಾಗಿರುವ ಅವರ ಬಣ್ಣದ ಮಾತುಗಳನ್ನು ನಂಬಲು ಮುಂದೆ ಸಾಧ್ಯವಿಲ್ಲ, ಅದಕ್ಕಾಗಿ ಅವರು ಧರ್ಮ, ಜಾತಿ, ಪಾಕಿಸ್ತಾನ ಮತ್ತು ಯುವದ್ಧಗಳ ಕುರಿತು ಮಾತನಾಡುತ್ತಾರೆ, ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ, ಮಹಿಳೆಯರು ಅವರ ಮಾತನ್ನು ನಂಬಬಾರದು ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಿದೆ. ಇಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದರೂ ಸಹ ಅದು ಸರ್ವ ಮಹಿಳೆಯರ ಒಕ್ಕೋರಿಲಿನ ಧ್ವನಿಯಾಗಿದೆ, ಬರುವ ದಿನಗಳಲ್ಲಿ ಸಾವಿರ ಸಾವಿರ ಮಹಿಳೆಯರು ತಾವಾಗಿಯೇ ಬೀದಿಗೆ ಬಂದು ಹೋರಾಡುತ್ತಾರೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಅವರು ಮಾತನಾಡಿ, ಮಹಿಳೆಯರು ಸುಮ್ಮನೆ ಇದ್ದಾರೆ ಎಂದರೆ ಅವರಿಗೆ ಏನೂ ತಿಳಿಯುವದಿಲ್ಲ ಎಂದೇ ಬಿಜೆಪಿ ಭಾವಿಸಿದಂತಿದೆ, ಸ್ವಲ್ಪ ದರ ಹೆಚ್ಚಳವಾದರೂ ಸಹ ಬಿಜೆಪಿಯ ಮಹಿಳಾ ಮಣಿಗಳು ರೋಡಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು, ಇಲ್ಲದ ಸುಳ್ಳು ಹೇಳುತ್ತಿದ್ದರು, ಈಗ ಅವರದ್ದೇ ಸರಕಾರವಿದೆ, ಈಗ ಕನಿಷ್ಟ ೩೦ ರಷ್ಟು ದರ ಕಡಿತ ಮಾಡಲು ಅವಕಾಶವಿದೆ ಆದರೂ ಬಿಜೆಪಿ ಜನರ ಸುಲಿಗೆ ಮಾಡುತ್ತಿದೆ ಎಂದರು. ಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಜನರ ಜೀವನ ಮಟ್ಟ ಸುಧಾರಿಸಿ, ದರ ಏರಿಕೆ ಸ್ಥಿರಗೊಳಿಸುತ್ತಾರೆ, ಸದಾ ಕಾಂಗ್ರೆಸ್ ಬಡವರ ಪರವಾದ ಸರಕಾರ, ಆಡಳಿತ ಕೊಟ್ಟಿದೆ ಎಂದರು.
ಕಾಂಗ್ರೆಸ್ ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್, ಪರಶುರಾಮ ಇತರರು ಮಾತನಾಡಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!