ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ದಾಳಿ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ

ಕೊಪ್ಪಳ: ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮುಸ್ಲಿಮರು ಸೇರಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಹಿಂಸಾಚಾರವನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ನಗರದ ಅಶೋಕ ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಈಶಾನ್ಯ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ವ್ಯಾಪಕ ಹಿಂಸಾಚಾರ ನಡೆಸುತ್ತಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಮೌನವಹಿಸಿವೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ತ್ರಿಪುರಾದಲ್ಲಿ ಈಚೆಗೆ ಮುಸ್ಲಿಮರ ಮೇಲೆ ಸಂಘಪರಿವಾರ ಕೇಂದ್ರಿತ ಪ್ಯಾಸಿಸ್ಟ್ ಹಿಂಸಾಚಾರ ನಡೆಸಿದ್ದು ಖಂಡನೀಯ.
ತ್ರಿಪುರಾರದಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ದೌರ್ಜನ್ಯ ಕೆಲ ದಿನಗಳಿಂದ ನಡೆಯುತ್ತಿದ್ದರೂ ಅಲ್ಲಿನ ಸರಕಾರ ಮಾತ್ರ ಯಾವ ಕ್ರಮವೂ ಕೈಗೊಳ್ಳದೆ ಮೌನವಾಗಿರುವುದು ನಿಜಕ್ಕೂ ಖಂಡನೀಯ ವಿಷಯವಾಗಿದೆ. ನಮ್ಮ ದೇಶದ ಪ್ರಧಾನಿಯವರು ಯಾವದೊ ಸಣ್ಣ ಸಣ್ಣ ವಿಷಯಗಳಿಗೂ ಟ್ವೀಟ್ ಮಾಡುತ್ತಿದ್ದವರೂ ಈಗ ತ್ರಿಪುರಾದಲ್ಲಿ ಮುಸ್ಲಿಂರ ಮೇಲೆ ಅವರ ಪ್ರಾರ್ಥನಾ ಸ್ಥಳಗಳ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚಾಗುತ್ತಿದ್ದರೂ ಸಹ ಮೌನವಾಗಿರುವುದು ನಿಜಕ್ಕೂ ಆಘಾತವುಂಟುಮಾಡಿದೆ. ತ್ರಿಪುರಾದಲ್ಲಿ ನಡೆದಿರುವ ಹಿಂಸಾಚಾರವನ್ನು ತಡೆಯಲು ವಿಫಲರಾಗಿರುವ ಮುಖ್ಯಮಂತ್ರಿಯನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಒತ್ತಾಯಿಸಿದರು.
ಇಂತಹ ಕೋಮು ಗಲಭೆ ಎಬ್ಬಿಸುವ ದುಷ್ಟ ಶಕ್ತಿಯನ್ನು ಬುಡ ಸಮೇತ ಕಿತ್ತೆಸೆಯಬೇಕು ಎಂದು ಅವರು ಹೇಳಿದರು. ತ್ರಿಪುರಾರದಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ದೌರ್ಜನ್ಯವನ್ನು ಅಲ್ಲಿನ ಸರಕಾರ ಮೌನವಾಗಿ ಸಹಮತಿಸುತ್ತಿದ್ದು ಖಂಡನೀಯ. ಮುಸ್ಲಿಂರ ಆಸ್ತಿಗಳು ಹಾನಿಯಾಗಿದ್ದು ಸರಕಾರ ಆ ಹಾನಿಯ ನಷ್ಟವನ್ನು ಸಂಪೂರ್ಣವಾಗಿ ಭರಿಸಬೇಕು. ನಾವೆಲ್ಲರೂ ಜಾತಿ, ಧರ್ಮ ಎಂದು ಕಿತ್ತಾಡದೇ ಭಾರತೀಯರು ಎಂದು ಪರಸ್ಪರ ಸಹೋದರರಾಗಿ ಬಾಳಬೇಕಿದೆ ಎಂದು ನಗರಸಭಾ ಸದಸ್ಯರು ಸಬಿಹಾ ಪಟೇಲ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ತ್ರಿಪುರಾದಲ್ಲಿ ಮುಸ್ಲಿಂರ ಮೇಲೆ ದೌರ್ಜನ್ಯವೆಸಗುತ್ತಾ ಮುಸ್ಲಿಂರ ಪ್ರಾರ್ಥನಾ ಸ್ಥಳವಾದ ೬ ಮಸೀದಿಗಳನ್ನು ಧ್ವಂಸ ಮಾಡಿದ್ದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಖಂಡಿತವಾಗಿಯೂ ನಾವು ಖಂಡಿಸುತ್ತೇವೆ. ನಮ್ಮ ಪ್ರಧಾನಿ ಬಾಂಗ್ಲಾದೇಶದ ಕುರಿತು ಮಾತನಾಡಿದರು. ಆದರೆ ತ್ರಿಪುರಾದಲ್ಲಿನ ಘಟನೆ ಕುರಿತು ಮಾತನಾಡದೆ ಯಾವುದೇ ಕ್ರಮವೂ ತೆಗೆದುಕೊಳ್ಳದೆ ಮೌನವಾಗಿರುವುದು ದೇಶದ ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ. ಮತ್ತು ತ್ರಿಪುರಾದಲ್ಲಿನ ಪೊಲೀಸರು ಸಹ ಕಿಡಿಗೇಡಿಗಳ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ನೋಡಿದರೆ ಇವರು ಜನರ ರಕ್ಷಕರು ಹೌದೋ ಇಲ್ಲವೋ ಎಂಬ ಸಂಶಯ ಹುಟ್ಟುತ್ತಿದೆ. ಆದಷ್ಟು ಬೇಗ ಈ ದೌರ್ಜನ್ಯದ ವಿರುದ್ಧ ಸರಕಾರ ಕ್ರಮಕೈಗೊಂಡು ಶಾಂತ ವಾತಾವರಣ ನಿರ್ಮಿಸುವಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಹುಮೇರಾ ಜಹಾನ್ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲೀಮುದ್ದೀನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಲ್ಮಾ ಜಹಾನ್, ಕಾರ್ಮಿಕರ ಜಿಲ್ಲಾ ಮುಖಂಡರಾದ ಮೌಲಾ ಹಣಿಗೆ, ನಾಸೀರ್ ಮಾಳೇಕೊಪ್ಪ, ಅಹ್ಮದ್ ಖಾನ್, ಅಸ್ಲಮ, ಸಾಲಿಡಾರಿಟಿ ಮೂವಮೆಂಟ್ ಅಧ್ಯಕ್ಷ ಗೌಸ್ ಪಟೇಲ್, ಕಲೀಮುಲ್ಲಾ ಖಾನ್, ಜಕ್ರಿಯಾ ಖಾನ್, ಎಸ್.ಐ.ಓ. ಸದಸ್ಯರು ಸೇರಿ ನೂರಾರು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!