ನಮ್ಮ ಸ್ವತ್ತುಗಳಿಗೆ ನಾವೇ ಜವಾಬ್ದಾರರು: ಎಸ್‌ಪಿ ಟಿ.ಶ್ರೀಧರ್

ಕೊಪ್ಪಳ: ನಮ್ಮ ಸ್ವತ್ತಾದ ಯಾವುದೇ ವಸ್ತುಗಳಿಗೆ ನಾವೇ ಜವಾಬ್ದಾರರಾಗಿರಬೇಕು. ನಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹಾಕಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹೇಳಿದರು.
ಅವರು ಗುರುವಾರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ೨೦೨೦ ಮತ್ತು ೨೦೨೧ನೇ ಸಾಲಿನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರಿರಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರು ಯಾವುದೇ ಊರಿಗೆ, ಮದುವೆ ಮತ್ತು ಜಾತ್ರೆಗಳಿಗೆ ಹೋಗುವಾಗ ತಮ್ಮ ಮನೆ ಮತ್ತು ಇತರ ಸ್ವತ್ತಿನ ಕುರಿತು ಎಚ್ಚರಿಕೆಯಿಂದ ಇರಬೇಕು ಮತ್ತು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿ ಸಾರ್ವಜನಿಕರು ಮೋಸ ಹೋಗಬಾರದು ಎಂದು ಹೇಳಿದರು.
ನಮ್ಮ ಅಧಿಕಾರಿಗಳ ಶ್ರಮದಿಂದ ಕಾನೂನು ಬದ್ದವಾಗಿ ವಶಪಡಿಸಿಕೊಂಡಿರುವ ಕಳ್ಳತನವಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುತ್ತಿದ್ದು, ೨೦೨೦ ಮತ್ತು ೨೦೨೧ ರ ಅಕ್ಟೋಬರ್ ಮಾಹೆವರೆಗಿನ ಕೊಪ್ಪಳ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ವರದಿಯಾಗಿದ್ದ ಸ್ವತ್ತಿನ ಪ್ರಕರಣಗಳನ್ನು ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಾಮಾಣಿಕ ಪ್ರಯತ್ನದಿಂದ ಒಟ್ಟು ೧೬೭ ಪ್ರಕರಣಗಳನ್ನು ಪತ್ತೆಮಾಡಿ ಒಟ್ಟು ೨,೨೬,೨೨,೭೭೯ ರೂ ಗಳನ್ನು ವಶಪಡಿಸಿಕೊಂಡಿದ್ದು ಫಿರ್ಯಾದಿದಾರರಿಗೆ/ ಸ್ವತ್ತಿನ ವಾರಸುದಾರರಿಗೆ ಮರಳಿ ನೀಡಲಾಗುತ್ತಿದೆ ಎಂದು ಹೇಳಿದರು.
ನಮ್ಮ ಬೆರಳಚ್ಚು ಅಧಿಕಾರಿಯಾದ ಚಂದ್ರಶೇಖರ್ ಅವರು ಸ್ವಯಂ ಆಸಕ್ತಿಯಿಂದ ಹಲವಾರು ಪ್ರಕರಣಗಳನ್ನು ಭೇದಿಸಲು ವಿಶೇಷ ಆಸಕ್ತಿ ತೋರಿಸಿದ್ದಾರೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಈಗಾಗಲೇ ಸೂಕ್ತ ಬಹುಮಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅವರು ಮಾತನಾಡಿ, ಪೊಲೀಸರು ಹಗಲಿರುಳು ಶ್ರಮಪಟ್ಟು ಪ್ರಕರಣಗಳನ್ನು ಬೇಧಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರ ಸಹಕಾರವು ನಮಗೆ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಸ್ಸುಗಳಲ್ಲಿ ಜನರನ್ನು ಯಾಮಾರಿಸಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಈ ಕುರಿತು ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಸ್ವತ್ತಿನ ವಾರಸುದಾರರಾದ ಗಂಗಾ ಹನುಮಂತಪ್ಪ ಗಡಗಿ ಅವರು ಮಾತನಾಡಿ, ನಮ್ಮ ಮನೆಯಲ್ಲಿ ಕಳ್ಳತನವಾದಾಗ ಪೋಲಿಸರಿಗೆ ಕರೆ ಮಾಡಿದೆ. ಅವರು ಬಂದು ಯಾರ ಮೇಲೆ ಸಂಶಯವಿದೆ ಎಂದು ಕೇಳಿದರು. ಒಬ್ಬರ ಹೆಸರನ್ನು ಹೇಳಿದ ೨ ತಾಸಿನಲ್ಲಿ ಅವನನ್ನು ಹಿಡಿದರು ಎಂದು ಪೋಲಿಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದರು.
ಇನ್ನೊಬ್ಬ ವಾರಸುದಾರರಾದ ವೆಂಕಟೇಶ ಅಮರ ಜ್ಯೋತಿ ಅವರು ಮಾತನಾಡಿ, ನಮ್ಮ ಮನೆಯಲ್ಲಿ ಕೆಲಸ ಮಾಡುವವನೇ ನಮ್ಮ ಮನೆ ಕಳ್ಳತನ ಮಾಡಿರುವುದನ್ನು ಪೋಲಿಸರು ಪತ್ತೆ ಹಚ್ಚಿದರು. ಹಾಗಾಗಿ ನಾವು ಯಾವಾಗಲೂ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಡಿವೈಎಸ್ಪಿ ಗೀತಾ ಬೇನಾಳ, ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಪೊಲೀಸ್ ಇನ್ಸ್ಪೆಕ್ಟರ್, ಸಬ್‌ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್‌ಗಳು ಮತ್ತು ಸ್ವತ್ತಿನ ವಾರಸುದಾರರು ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!