ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ

ಬೆಂಗಳೂರು,ಆ.೭-ತೀವ್ರ ಕಗ್ಗಂಟಾಗಿ ಪರಿಣಿಮಿಸಿದ್ದ ನೂತನ ಸಚಿವರ ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿದಿದ್ದು, ಸಂಘಪರಿವಾರದ ನಿಷ್ಠರಿಗೆ ಈ ಬಾರಿ ಪ್ರಮುಖ ಖಾತೆಗಳನ್ನು ನೀಡಿ ಮಣೆ ಹಾಕಲಾಗಿದೆ. ಅಚ್ಚರಿ ಎಂಬಂತೆ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ, ಎಸ್.ಸುನೀಲ್‌ಕುಮಾರ‍್ಗೆ ಇಂಧನದ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ, ಬಿ.ಸಿ.ನಾಗೇಶ್‌ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಿ.ಸಿ.ಪಾಟೀಲ್‌ಗೆ ಲೋಕೋಪಯೋಗಿ ಖಾತೆಯನ್ನು ನೀಡಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿದ್ದ ೧೩ ಸಚಿವರಿಗೆ ಹಳೆಯ ಖಾತೆಗಳನ್ನೇ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಇಂಧನ, ಕಂದಾಯ ಖಾತೆ ಮೇಲೆ ಕಣ್ಣಿಟ್ಟಿದ್ದವರಿಗೂ ಈ ಬಾರಿ ನಿರಾಸೆಯಾಗಿದೆ.ಯಾರು ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲವೋ ಅಂಥವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದ್ದು, ಪ್ರಮುಖ ಖಾತೆ ಸಿಕ್ಕೇ ಸಿಗುತ್ತದೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ಮೇಯ್ದವರಿಗೆ ಭಾರೀ ನಿರಾಸೆ ಉಂಟಾಗಿದೆ.ಹಿಂದಿನ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಡಿಸಿಎಂ ಜೊತೆಗೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿಬಿಟಿ, ಕೌಶಲ್ಯಾಭಿವೃದ್ಧಿ ಖಾತೆಯನ್ನೇ ನೀಡಲಾಗಿದೆ.ಕಳೆದ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ನಿರಾಸೆಗೊಂಡಿದ್ದ ಶ್ರೀರಾಮುಲುಗೆ ಮುಂಬಡ್ತಿ ಎಂಬಂತೆ ಸಾರಿಗೆ ಖಾತೆ ಜೊತೆಗೆ ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಖಾತೆಯನ್ನು ವಹಿಸಲಾಗಿದೆ.
ವಿವಾದಕ್ಕೆ ಸಿಲುಕಿದ್ದ ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ ಖಾತೆಯನ್ನೇ ನೀಡಿರುವುದು ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಸಂಪುಟ ಸೇರಿರುವ ಹಾಲಪ್ಪ ಆಚಾರ‍್ಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಸಹ ಕೊಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಬ್ಬಂದಿ ಮತ್ತು ಸುಧಾರಣೆ,ಹಣಕಾಸು, ಗುಪ್ತಚರ, ಗೃಹ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಗೃಹ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆ ಮೇಲೆ ಕಣ್ಣಿಟ್ಟಿದ್ದ ಆರ್.ಅಶೋಕ್ ಅವರನ್ನು ಕಂದಾಯ, ವಿ.ಸೋಮಣ್ಣಗೆ ವಸತಿ, ಎಸ್.ಟಿ.ಸೋಮಶೇಖರ‍್ಗೆ ಸಹಕಾರ, ಭೈರತಿ ಬಸವರಾಜ್‌ಗೆ ನಗರಾಭಿವೃದ್ಧಿ, ಬಿ.ಸಿ.ಪಾಟೀಲ್‌ಗೆ ಕೃಷಿ, ಡಾ.ಕೆ.ಸುಧಾಕರ‍್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ನೀಡಲಾಗಿದೆ.
ಉಳಿದಂತೆ ಗೋಪಾಲಯ್ಯ ಅವರಿಗೆ ಅಬಕಾರಿ, ಎಂಟಿಬಿ ನಾಗರಾಜ್‌ಗೆ ಪೌರಾಡಳಿತ, ಕೆ.ನಾರಾಯಣಗೌಡಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ, ಪ್ರಭು ಚಹ್ವಾಣ್‌ಗೆ ಪಶು ಸಂಗೋಪನೆ, ಶಿವರಾಮ್ ಹೆಬ್ಬಾರ‍್ಗೆ ಕಾರ್ಮಿಕ ಖಾತೆಯನ್ನು ವಹಿಸಲಾಗಿದೆ.ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವುದರಿಂದ ಜೆ.ಸಿ.ಮಾಧುಸ್ವಾಮಿಗೆ ಸಣ್ಣ ನೀರಾವರಿ ಜೊತೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ವಹಿಸಲಾಗಿದೆ.ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿಗೆ ಸಮಾಜ ಕಲ್ಯಾಣ ಖಾತೆಯನ್ನೂ ವಹಿಸಲಾಗಿದೆ.
ತೀವ್ರ ವಿರೋಧದ ನಡುವೆ ಡಾ.ಕೆ.ಸುಧಾಕರ‍್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜೊತೆಗೆ ವೈದ್ಯಕೀಯ ಶಿಕ್ಷಣ, ಸಾರಿಗೆ ಖಾತೆ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್‌ಗೆ ಪೌರಾಡಳಿತ ಜೊತೆಗೆ ಸಣ್ಣ ಕೈಗಾರಿಕೆ ಹೊಣೆಗಾರಿಕೆ ಕೊಡಲಾಗಿದೆ.ಕೊನೆ ಕ್ಷಣದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಶಂಕರ್ ಪಟೇಲ್ ಮುನೇನಕೊಪ್ಪಗೆ ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ಮುನಿರತ್ನಗೆ ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಕಾರ್ಯಕ್ರಮಗಳ ಅನುಷ್ಠಾನ ಖಾತೆಯನ್ನು ವಹಿಸಲಾಗಿದೆ.
ಖಾತೆಗಳ ವಿವರ:
೧. ಸಿಎಂ ಬಸವರಾಜ ಬೊಮ್ಮಾಯಿ-ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್
೨. ಅರಗ ಜ್ಞಾನೇಂದ್ರ -ಗೃಹ ಖಾತೆ
೩. ಮುರುಗೇಶ್ ನಿರಾಣಿ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ
೪. ಶ್ರೀರಾಮುಲು -ಸಾರಿಗೆ ಹಾಗೂ ಎಸ್ಸಿ/ಎಸ್ಟಿ ಕಲ್ಯಾಣ ಖಾತೆ
೫. ಸುನಿಲ್ ಕುಮಾರ್- ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
೬. ಆರ್.ಅಶೋಕ್ -ಕಂದಾಯ ಇಲಾಖೆ
೭. ಸಿ.ಸಿ.ಪಾಟೀಲ್ -ಲೋಕೋಪಯೋಗಿ
೮. ಗೋವಿಂದ ಕಾರಜೋಳ-ಜಲಸಂಪನ್ಮೂಲ ಖಾತೆ
೯. ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
೧೦. ಉಮೇಶ್ ಕತ್ತಿ -ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
೧೧. ಮಾಧುಸ್ವಾಮಿ- ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
೧೨. ಸಚಿವ ಕೆ.ಎಸ್.ಈಶ್ವರಪ್ಪ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ
೧೩. ಕೋಟಾ ಶ್ರೀನಿವಾಸ್ ಪೂಜರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
೧೪. ವಿ.ಸೋಮಣ್ಣ -ವಸತಿ ಖಾತೆ
೧೫. ಶಂಕರ್ ಪಾಟೀಲ್ ಮುನೇನಕೊಪ್ಪ-ಕೈಮಗ್ಗ ಮತ್ತು ಜವಳಿ, ಸಕ್ಕರೆ ಖಾತೆ
೧೬. ಬಿ.ಸಿ.ಪಾಟೀಲ್ -ಕೃಷಿ ಖಾತೆ
೧೭. ಶಶಿಕಲಾ ಜೊಲ್ಲೆ -ಮುಜರಾಯಿ, ವಕ್ ಮತ್ತು ಹಜ್ ಖಾತೆ
೧೮. ಎಸ್ .ಟಿ .ಸೋಮಶೇಖರ್- ಸಹಕಾರ ಖಾತೆ
೧೯. ಡಾ.ಸಿ.ಎನ್.ಅಶ್ವತ್ಥನಾರಾಯಣ- ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ
೨೦. ಕೆ.ಗೋಪಾಲಯ್ಯ- ಅಬಕಾರಿ ಖಾತೆ
೨೧. ಡಾ. ಸುಧಾಕರ್ -ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
೨೨. ಕೆ.ಸಿ.ನಾರಾಯಣಗೌಡ – ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆ
೨೩. ಬೈರತಿ ಬಸವರಾಜ್ – ನಗರಾಭಿವೃದ್ಧಿ ಖಾತೆ
೨೪. ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ ಖಾತೆ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
೨೫. ಆನಂದ್ ಸಿಂಗ್- ಪ್ರವಾಸೋದ್ಯಮ
೨೬. ಪ್ರಭು ಚವ್ಹಾಣ್ -ಪಶು ಸಂಗೋಪನೆ ಖಾತೆ
೨೭. ಬಿ.ಸಿ.ನಾಗೇಶ್ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆ
೨೮. ಎಸ್.ಅಂಗಾರ -ಬಂದರು ಮತ್ತು ಮೀನುಗಾರಿಕೆ
೨೯. ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ
೩೦. ಎಂ.ಟಿ.ಬಿ ನಾಗರಾಜ್ -ಪೌರಾಡಳಿತ/ಸಣ್ಣ ಕೈಗಾರಿಕೆ ಖಾತೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!