ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ: ವೆಲ್ಫೇರ್ ಪಾರ್ಟಿ

ಕೊಪ್ಪಳ:ಮತಾಂತರ ನಿಷೇದ ಮಸೋದೆ ಸಂವಿಧಾನ ವಿರೋಧಿ, ಇದು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮೇಲೆ ದೌರ್ಜನ್ಯ ಎಸಗಲು ಪರವಾನಿಗೆ ನೀಡುವ ಹುನ್ನಾರ, ಸಂವಿಧಾನ ನೀಡಿರುವ ಸ್ವತಂತ್ರದ ಮೇಲೆ ಆಕ್ರಮಣವಾಗಿದೆ, ರಾಜ್ಯ ಸರಕಾರ ಇದನ್ನು ಯಾವುದೇ ಕಾರಣಕ್ಕೂ ಜಾರಿ ಗೊಳಿಸಬಾರದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಿರಿಯ ನ್ಯಾಯವಾದಿ ತಾಹಿರ್ ಹುಸೇನ್ ಹೇಳಿದರು.ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ,
ಮತಾಂತರ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಹೊನ್ನಾರ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಜಾರಿ ಮಾಡಲು ಹೊರಟಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಸೂದೆಯು ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕನ್ನು ಕಸಿಯುವ ಸಂವಿಧಾನ ವಿರೋಧಿ ಕ್ರಮವಾಗಿದೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವವಾಗಿ ಮಸೂದೆ ಸಂವಿಧಾನ ಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಸರ್ವಾಧಿಕಾರಿ ಕ್ರಮವಾಗಿದೆ.ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಮತಧರ್ಮವನ್ನು ಅನುಸರಿಸುವ ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡುವ ಸ್ವಾತಂತ್ರ್ಯ ಹೊಂದಿದ್ದಾನೆ. ಬಲವಂತ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶ ಎಂದು ಹೇಳಲಾದ ಈ ಮಸೂದೆಯು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು. ದುರುದ್ದೇಶಪೂರಿತ ಮತಾಂತರ ಮಾಡಲಾಗಿದೆ ಎಂದು ಯಾರ ಮೇಲಾದರೂ ಆರೋಪಿಸಿದರೆ ಅದನ್ನು ಸಾಬೀತು ಮಾಡುವುದು ಆರೋಪ ಮಾಡಿದವರ ಮತ್ತು ಸರ್ಕಾರದ ಹೊಣೆ ಆಗಬೇಕು. ಇದು ಸಹಜ ನ್ಯಾಯ. ಆದರೆ ಆರೋಪಕ್ಕೆ ಗುರಿಯಾದವರು ತಾವು ದುರುದ್ದೇಶದ ಮತಾಂತರ ಮಾಡಿಲ್ಲ ಎಂದು ಸಾಬೀತುಪಡಿಸಬೇಕು ಎಂದು ಈ ಮಸೂದೆ ಹೇಳುತ್ತಿದೆ ಎಂದು ವಿವಿರಿಸಿದರು.

ಮುಂದುವರೆದು ಮಾತನಾಡಿ ರಾಜ್ಯ ಸರಕಾರವು ಕೃಷಿ ಕಾಯ್ದೆಗಳಲ್ಲಿ ರೈತ ವಿರೋಧಿ ತಿದ್ದುಪಡಿ ಗಳನ್ನು ಕೂಡಲೇ ಹಿಂಪಡೆಯುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಆದರೆ ರಾಜ್ಯದಲ್ಲಿ ಅಂಗೀಕಾರವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕು.ಭೂ ಸುಧಾರಣಾ ಕಾಯ್ದೆ, ಗೊ ಹತ್ಯೆ ನಿಷೇದ ಕಾಯ್ದೆ,ಎ ಪಿ ಎಂ ಸಿ ಕಾಯ್ದೆಗಳಲ್ಲಿ ರಾಜ್ಯ ಸರಕಾರ ೨೦೨೦ ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಹಿಂಪಡಿಯಬೇಕು. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಬಂಡವಾಳಶಾಹಿಗಳ ಮಣೆ ಹಾಕುತ್ತಿವೆ.ಸಹಜದ ಸಂಗತಿ ದೇಶದ ಬೆನ್ನೆಲುಬು ಅನ್ನದಾತ ಆಗಿರುವ ಬಗ್ಗೆ ಯಾವುದೇ ಕಾಳಜಿ ಇಲ್ಲ.ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಹೈನುಗಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ರೈತ ಕುಟುಂಬಗಳ ಆರ್ಥಿಕತೆಗೆ ಸರ್ಕಾರದ ಕ್ರಮದಿಂದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಜನರ ಆಹಾರದ ಹಕ್ಕನ್ನೇ ಕಸಿದುಕೊಂಡಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದರಿಂದ ಅಲ್ಲಿನ ರೈತರು ಅನುಪಯುಕ್ತ ಹಸು, ಎಮ್ಮೆಗಳನ್ನು ಬೀದಿಯಲ್ಲಿ ಬಿಟ್ಟಿದ್ದಾರೆ. ಸಾಕಷ್ಟು ರೈತರು ಹೈನುಗಾರಿಕೆಯಿಂದ ವಿಮುಖರಾಗಿದ್ದಾರೆ.ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.?ಅನುಪಯುಕ್ತ ಜಾನುವಾರು, ಬಂಜೆತನದ ರಾಸುಗಳು ಮತ್ತು ಗಂಡು ಕರುಗಳ ಮಾರಾಟದಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು. ಗೋಹತ್ಯೆ ನಿರ್ಬಂಧದಿಂದ ರೈತರಿಗೆ ಆರ್ಥಿಕ ಹೊರೆ ಬೀಳಲಿದೆ.ಕರ್ನಾಟಕದಲ್ಲಿ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಗೋಹತ್ಯೆ ನಿಷೇಧಿಸಿರುವುದು ಖಂಡನೀಯ. ಗೋಹತ್ಯ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ಮಾಡಹೊರಟಿರುವ ಈ ತಿದ್ದುಪಡಿ ನಗರೀಕರಣಕ್ಕೆ ದಾರಿಮಾಡಿಕೊಡುತ್ತದೆ. ಗ್ರಾಮೀಣ ಪ್ರದೇಶವನ್ನು ನಾಶ ಮಾಡುತ್ತದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವಾಗುವುದರಲ್ಲಿ ಸಂಶಯವಿಲ್ಲ. ಭೂ ಸುಧಾರಣಾ ಕಾಯ್ದೆಯ ಮುಖ್ಯ ಉದ್ದೇಶವೇ ಕೃಷಿ ಭೂಮಿಯ ರಕ್ಷಣೆಯನ್ನು ಮಾಡುವುದು ಆದರೆ ಈ ತಿದ್ದುಪಡಿ ಅದರ ಉದ್ದೇಶಕ್ಕೇ ವಿರುದ್ಧವಾಗಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ವಿರುದ್ದವಾಗಿದ್ದು ಇದು ಜಾರಿಗೆ ಬಂದರೆ ಆರ್ಥಿಕ ಚಟುವಟಿಕೆಗಳೇ ಬುಡಮೇಲಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಇಡೀ ವ್ಯವಸ್ಥೆಯೇ ಬಂಡವಾಳಶಾಹಿಗಳ ಕೈಸೇರುತ್ತದೆ. ಅಪನಗದೀಕರಣ, ಜಿಎಸ್ ಟಿಯ ಭಾರವನ್ನು ಹೊರಲಾರದೇ ದೇಶದ ಆರ್ಥಿಕತೆ ತತ್ತರಿಸುತ್ತಿರುವ ಹೊತ್ತಿಗೆ ಸರಿಯಾಗಿ ಕೊರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಹೇರಿ ಭಾರತದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಮಧ್ಯಮ ವರ್ಗದವರು ಬಡವರಾಗುತ್ತಿದ್ದರೆ ಬಡವರು ಹೊಟ್ಟೆಗೆ ಹಿಟ್ಟಿಲ್ಲದೇ ಒದ್ದಾಡುವಂತಾಗಿದೆ. ಎಷ್ಟೋ ಕುಟುಂಬಗಳಿಗೆ ದಿನದ ಒಂದು ಹೊತ್ತಿನ ಊಟವೂ ಸಿಗಲಾರದ ಪರಿಸ್ಥಿತಿಯಿದೆ. ಇಂತಹ ಸಮಯದಲ್ಲಿ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿ ಕೃಷಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ. ಜನರ ಜೀವ ಉಳಿಸಿ ಹೊಟ್ಟೆ ತುಂಬಲು ದಾರಿ ತೋರಿಸಬೇಕಾದ ಸರ್ಕಾರವೇ ಬಂಡವಾಳ ಶಾಹಿಗಳ ಹೊಟ್ಟೆ ತುಂಬುತ್ತಿದೆ. ಹೀಗೆಯೇ ಮುಂದುವರೆದರೆ ಹೊಟ್ಟೆತುಂಬಿದ ಬಂಡವಾಳಶಾಹಿಗಳ ಹೊಟ್ಟೆ ಮತ್ತಷ್ಟು ದೊಡ್ಡದಾಗುತ್ತದೆ ಮತ್ತು ಉಳಿದವರು ಹಸಿವಿನಲ್ಲಿ ನರಳಾಡಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರವು ರೈತರ ಯೋಜನೆಗಳನ್ನು ಜಾರಿಗೆ ತರಬೇಕು ರಿಯಾಯಿತಿ ದರಗಳಲ್ಲಿ ಕೃಷಿ ಪರಿಕರಗಳನ್ನು ರೈತರಿಗೆ ಪೂರೈಕೆ ಮಾಡಬೇಕು ವೈಜ್ಞಾನಿಕ ಬೆಲೆಗಳನ್ನು ರೈತರಿಗೆ ನಿಗದಿಪಡಿಸಬೇಕು ಕೃಷಿ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ಕೈ ಬಿಡಬೇಕು ಕೃಷಿಕರು ಅಲ್ಪಸಂಖ್ಯಾತರು ದಲಿತರಿಗೆ ರಕ್ಷಣೆ ನೀಡಬೇಕು. ರಾಷ್ಟ್ರಕ್ಕೆ ಅನ್ನ ನೀಡುವ ಅನ್ನದಾತರ ಮೇಲಿನ ದೌರ್ಜನ್ಯ ಕೊನೆಗೊಳಿಸಿ ರೈತರ ಸಮಸ್ಯೆಗಳಿಗೆ ಸರಕಾರವು ಸ್ಪಂದಿಸುವ ಮೂಲಕ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆನ್ನುವುದು ನಮ್ಮ ಒತ್ತಾಯವಾಗಿದೆ.

ರಾಯಣ್ಣ ಮೂರ್ತಿ ಭಗ್ನ: ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹ ಸ್ವಾತಂತ್ರ್ಯ ಯೋಧ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ. ರಾಜ್ಯದ ಭಾವುಟ ಸುಟ್ಟರು. ಈಗ ರಾಯಣ್ಣನ ಪ್ರತಿಮೆ ಭಗ್ನ ಮಾಡಿದ್ದಾರೆ. ನಮ್ಮ ಸ್ವಂತ ನೆಲದಲ್ಲೇ ನಮ್ಮ ದೇಶ ಪ್ರೇಮಿಗಳಿಗೆ ಭದ್ರತೆ ಇಲ್ಲವೆಂದರೆ ಏನರ್ಥ? ಬೆಳಗಾವಿ ಇರುವುದು ಕರ್ನಾಟಕದಲ್ಲೋ ಮಹಾರಾಷ್ಟ್ರದಲ್ಲೋ? ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕ್ಗಳಿಗಾಗಿ ಆ ಪುಂಡರಿಗೆ ಸಲುಗೆ ಕೊಟ್ಟ ಪರಿಣಾಮ ಇವೆಲ್ಲವನ್ನೂ ನಾವು ಅನುಭವಿಸಬೇಕಾಗಿದೆ. ಅವರಿಗೆ ಈಗಲೇ ಸರಿಯಾಗಿ ಪಾಠ ಕಲಿಸಿದಿದ್ದರೆ ಮುಂದೆ ಅನುಭವಿಸಬೇಕಿರುವುದು ಸಾಕಷ್ಟಿದೆ. ಬಿಜೆಪಿಯ ೨೫ ಸಂಸದರು ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ, ದೂರದೃಷ್ಟಿಯ ಕೊರತೆಗಳನ್ನು ಮುಚ್ಚಿಕೊಳ್ಳಲು ಪ್ರತಿಮೆ ಧ್ವಂಸ, ಬಾವುಟ ಸುಡುವಂತಹ ಹೀನ ಕೃತ್ಯಗಳಲ್ಲಿ ತಮ್ಮ ಪುಂಡ ಕಾರ್ಯಕರ್ತರನ್ನು ತೊಡಗಿಸಿ ಪರ-ವಿರೋಧದ ಉಯಿಲೆಬ್ಬಿಸಿ ರಾಜ್ಯದ ನೆಮ್ಮದಿ ಕದಡುವ ಮೂಲಕ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಮುಂದಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಿರಿಯ ನ್ಯಾಯವಾದಿ ತಾಹಿರ್ ಹುಸೇನ್ ಹೇಳಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಕೊಪ್ಪಳ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿಮುದ್ದಿನ್ ಸೇರಿದಂತೆ ಇತರರು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!