ಮಹನೀಯರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು : ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ: ಪೀಳಿಗೆಗೆ ಮಹನೀಯರ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸರ್ಕಾರದಿಂದ ಡಾ. ಬಾಬು ಜಗಜೀವನರಾಂ ರವರಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಹಾಗಾಗಿ ಮಹನೀಯರ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ (ಏ.೦೫)ದಂದು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ೧೧೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನರಾಂ ರವರ ಜೀವನದ ಸಂಘರ್ಷ, ಸಾಧನೆಗಳು ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಬೇಕು ಈ ಮೂಲಕ ನಾವೆಲ್ಲರೂ ಅವರ ಹಾದಿಯಲ್ಲಿ ಸಾಗಬೇಕು. ಬಾಬು ಜಗಜೀವನರಾಂ ಅವರು ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಅದರಿಂದ ದೇಶಕ್ಕಾದ ಉಪಯೋಗಗಳು, ದೃಢ ಸಂಕಲ್ಪ ಮುಂತಾದವುಗಳ ಬಗ್ಗೆ ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲೂ ಅವರ ಕುರಿತ ಲೇಖನಗಳು ಹಾಗೂ ಮಾಹಿತಿ ಲಭ್ಯವಿದ್ದು, ಅವುಗಳನ್ನು ಓದಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯ ಹಾಗೂ ಶೋಷಿತರ ಅಭಿವೃದ್ಧಿಗೆ ಜಗಜೀವನರಾಂ ಅವರು ಬಹಳಷ್ಟು ಶ್ರಮಿಸಿದ್ದಾರೆ. ಅಸ್ಪೃಶ್ಯತೆ, ಅಸಮಾನತೆ ಸೇರಿದಂತೆ ವಿವಿಧ ನಕಾರಾತ್ಮಕ ವಿಷಯಗಳನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಬೆಳವಣಿಗೆಯಲ್ಲಿ ನಾವು ಸಹಕಾರಿಯಾಗಿದ್ದರೆ ನಮ್ಮ ಜೀವನವೂ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಗಂಗಾವತಿಯ ಎಚ್.ಆರ್. ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಾನಂದ .ವಗ್ಗೆ ಅವರು ತಮ್ಮ ಉಪನ್ಯಾಸದಲ್ಲಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಪ್ರತಿಪಾದಕ, ಸಮಾಜ ಸೇವಕ, ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನರಾಂ ಅವರು ಬಿಹಾರದ ಆರಾ ಪಟ್ಟಣದಲ್ಲಿ ೧೯೦೮ರ ಏ. ೦೫ರಂದು ಸೋಭಿರಾಮ್ ಮತ್ತು ವಸಂತಿದೇವಿ ದಂಪತಿಗಳ ಏಳನೇ ಮಗನಾಗಿ ಜನಿಸಿದರು. ಇವರು ಶಾಲಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ದಲಿತರಿಗೆ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಶಾಲೆಯಲ್ಲಿ ಇರಿಸಿದ್ದ ಎರಡು ನೀರಿನ ಮಡಿಕೆಗಳಲ್ಲಿ ಒಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಇನ್ನೊಂದು ಹಿಂದೂ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿತ್ತು. ಹಾಸ್ಟೆಲ್‌ನಲ್ಲಿ ಅಸ್ಪೃಶ್ಯರಾದ ಜಗಜೀವನರಾಂ ಅವರಿಗೆ ಊಟ ನೀಡಲು ಹಾಗೂ ಕ್ಷೌರ ಮಾಡಲು ನಿರಾಕರಣೆ ಮಾಡಲಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೂ ಅವರು ಉತ್ತಮ ಶಿಕ್ಷಣ ಪಡೆದು ದೊಡ್ಡ ಸಾಧನೆ ಮಾಡಿದ್ದಾರೆ. ಕೆಳವರ್ಗದ ಜನರು ಯಾವಾಗಲೂ ಮೇಲ್ವರ್ಗದವರ ಸೇವೆಯನ್ನು ಮಾಡಬೇಕು ಎಂಬುದು ಅಲಿಖಿತ ನಿಯಮವಾಗಿತ್ತು. ಇಂತಹ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಎಂಬ ಎರಡು ಮಹಾನ್ ಚೇತನಗಳು ಶೋಷಿತ ಜನಾಂಗದ ಎರಡು ಕಣ್ಣುಗಳಂತೆ ಇದ್ದರು ಎಂದು ಅವರು ಹೇಳಿದರು.
ಶೋಷಿತ ವರ್ಗಕ್ಕೆ ಈಗಲೂ ಪೂರ್ಣ ಸ್ವಾತಂತ್ರ‍್ಯ ಸಿಕ್ಕಿಲ್ಲ. ಈಗಲೂ ಕೆಲವು ಕಡೆಗಳಲ್ಲಿ ಅಸ್ಪೃಶ್ಯತೆ, ಅಸಮಾನತೆ ಇದೆ. ಏಪ್ರಿಲ್ ತಿಂಗಳು ಶೋಷಿತ ವರ್ಗಕ್ಕೆ ಮುಖ್ಯವಾದ ತಿಂಗಳು. ಈ ತಿಂಗಳನ್ನು ಮರೆಯಬಾರದು. ಕನಕದಾಸರು ದಾಸವಾಣಿ ಹಾಗೂ ಬಸವಣ್ಣನವರು ವಚನಗಳ ಮೂಲಕ ಜಾತೀಯತೆ ವಿರುದ್ಧ ಹೋರಾಡಿ, ಎಲ್ಲರಿಗೂ ಸಮಾನತೆ ದೊರೆಯಬೇಕು ಎಂದು ಸಾಮಾಜಿಕ ಜಾಗೃತಿ ಮೂಡಿಸಿದರು. ಜಗಜೀವನರಾಂ ಅವರಿಗೆ ವಿಜ್ಞಾನಿ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಜಾತೀಯತೆಯಿಂದ ಅವರ ಕನಸನ್ನು ಮರೆಯಬೇಕಾಯಿತು. ಮಾನವೀಯ ಕಳಕಳಿ ಹಾಗೂ ಮೌಲ್ಯಗಳನ್ನು ಹೊಂದಿದ್ದ ಜಗಜೀವನರಾಂ ಅವರು, ೧೯೩೫ರಲ್ಲಿ ಕಾಂಗ್ರೆಸ್ ಸೇರುತ್ತಾರೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರುತ್ತಾರೆ. ಕಾಂಗ್ರೆಸ್‌ನ ದಲಿತ ಮುಖಂಡರಾಗಿ ಗುರುತಿಸಿಕೊಳ್ಳುತ್ತಾರೆ. ದಲಿತರ ಹಕ್ಕುಗಳಿಗಾಗಿ ಹೋರಾಟ, ಶೋಷಿತರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ರಾಜಕೀಯದ ಅನುಕೂಲವನ್ನು ಬಳಸಿಕೊಂಡರು. ಕಾರ್ಮಿಕ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು. ಕೂಲಿಕಾರರಿಗೆ ಅನೇಕ ಸೌಲಭ್ಯ, ಕಾಯ್ದೆಗಳು ಹಾಗೂ ಯೋಜನೆಗಳನ್ನು ರೂಪಿಸುತ್ತಾರೆ. ಬಳಿಕ ಉದ್ಯೋಗ ಮತ್ತು ಪುನರ್ವಸತಿ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಭಾರತದಿಂದ ಬಾಂಗ್ಲಾ ದೇಶ ವಿಭಜನೆಯ ಸಂದರ್ಭದಲ್ಲಿ ಬಾಬು ಜಗಜೀವನರಾಂ ರಕ್ಷಣಾ ಮಂತ್ರಿಯಾಗಿ ಕೆಲಸ ಮಾಡುತ್ತಾರೆ. ಕೃಷಿ ಖಾತೆಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಇದಕ್ಕಾಗಿ ಅವರಿಗೆ ಹಸಿರು ಕ್ರಾಂತಿಯ ಹರಿಕಾರರು ಎಂಬ ಬಿರುದೂ ಸಲ್ಲುತ್ತದೆ. ಕೊನೆಗೆ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿ, ಅಂದಿನ ಪ್ರಧಾನಿ ಇಂದಿರಾಗಾAಧಿ ಅವರು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅವರು ಕಾಂಗ್ರೆಸ್‌ನ್ನು ತೊರೆದು, ಹೊಸ ಪಕ್ಷವನ್ನು ಸ್ಥಾಪನೆ ಮಾಡಿದರು ಎಂದು ಬಾಬು ಜಗಜೀವನರಾಂ ಅವರ ಜೀವನದ ಪ್ರಮುಖ ಘಟನೆಗಳ ಕುರಿತು ವಿವರಗಳನ್ನು ನೀಡಿದರು.
ದಿಶಾ ಸಮಿತಿ ಸದಸ್ಯ ಗಣೇಶ ಹೊರತಟ್ನಾಳ ಮಾತನಾಡಿ, ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸವನ್ನು ಬಾಬು ಜಗಜೀವನ್ ರಾಂ ಮಾಡಿದ್ದಾರೆ. ನಾವೆಲ್ಲರೂ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಜಗಜೀವನರಾಂ ಅವರು ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಆಹಾರ ಉತ್ಪಾದನೆಗೆ ಒತ್ತು ಕೊಟ್ಟು, ಅದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳಿಂದಾಗಿ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ದೇಶಕ್ಕೆ, ಶ್ರಮಿಕ ಹಾಗೂ ಶೋಷಿತ ವರ್ಗಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ನAತರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ  ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಶಿಂತ್ರೆ ಅವರು ಸ್ವಾಗತಿಸಿದರು. ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘುನಂದನ್ ಮೂರ್ತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಸಮುದಾಯದ ಮುಖಂಡರಾದ ಗಾಳೆಪ್ಪ ಪೂಜಾರ, ಗವಿಸಿದ್ದಪ್ಪ ಕಂದಾರಿ, ಡಾ.ಜ್ಞಾನಸುಂದರ್ ಕಂದಾರಿ, ರಾಮಣ್ಣ ಕಂದಾರಿ, ಆರ್.ಎಚ್.ಕಟ್ಟಿಮನಿ, ಚನ್ನಬಸಪ್ಪ, ಮಂಜುನಾಥ ಆರೆಂಟ್ಮೂರು, ಆನಂದ ಭಂಡಾರಿ  ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!