ರಾಜ್ಯದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸಿ “ಮಹಿಳೆಯರ ಸುರಕ್ಷತೆ – ದೇಶದ ಹೊಣೆ” ಎಂಬ ರಾಜ್ಯವ್ಯಾಪಿ ಅಭಿಯಾನ

ಕೊಪ್ಪಳ : ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ವಿರುದ್ಧ ವೆಲ್ಫೇರ್ ಪಾರ್ಟಿ ಮಹಿಳಾ ವಿಭಾಗದ ವತಿಯಿಂದ ಮಹಿಳೆಯರ ಸುರಕ್ಷತೆ – ದೇಶದ ಹೊಣೆ* ಎಂಬ ಶೀರ್ಷಿಕೆಯಡಿ
ರಾಜ್ಯವ್ಯಾಪಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಅಭಿಯಾನವು ಸೆಪ್ಟೆಂಬರ್ 12 ರಿಂದ 19, 2021 ರವರೆಗೆ ನಡೆಸಲಾಗುವುದು ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಕಾರ್ಯಕಾರಣಿ ಸದಸ್ಯರು ಹಾಗೂ ನಗರಸಭೆ ಸದಸ್ಯೆ ಸಬಿಯಾ ಪಟೇಲ್ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸರಕಾರಿ ಅಂಕಿ ಅಂಶ ಪ್ರಕಾರ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರದಲ್ಲಿ ಕೇವಲ ಒಂದು ವರ್ಷದಲ್ಲಿ 43% ಹೆಚ್ಚಳ ಆಗಿದೆ. ಕಳೆದ ವರ್ಷ ಜೂನ್ ನಲ್ಲಿ 580 ಪ್ರಕರಣ ಗಳು ದಾಖಲಾದರೆ ಈ ವರ್ಷ 833 ಪ್ರಕಾರಣಗಳು ದಾಖಲಾಗಿವೆ. ಅದೇ ರೀತಿ ಹಿಂಸೆ ಪ್ರಕರಣ ಗಳು 39% ಹೆಚ್ಚಾಗಿವೆ ಅದು 733 ರಿಂದ 1022 ಮತ್ತು ಅಪಹರಣದ ಪ್ರಕರಣಗಳು ಕಳೆದ ವರ್ಷ 1026 ರಿಂದ ಈ ವರ್ಷಕ್ಕೆ 1580 ಕ್ಕೇರಿದೆ, ವರದಕ್ಷಿಣೆ ಕಿರುಕುಳ ಮತ್ತು ಸಾವಿನ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ ಇವೆ.

2020 ಕ್ಕೆ ಹೋಲಿಸಿದರೆ 2021 ರ ಮೊದಲ ಆರು ತಿಂಗಳಲ್ಲಿ ಕೇವಲ ದೆಹಲಿಯೊಂದರಲ್ಲೇ ಸಂಭವಿಸಿದ ಮಹಿಳೆಯರ ವಿರುದ್ಧದ ಅಪರಾಧಗಳು 63.3% ಹೆಚ್ಚಾಗಿದೆ ಎಂದು ದೆಹಲಿ ಪೊಲೀಸರು ಅನಾವರಣಗೊಳಿಸಿದ ಅಂಕಿಅಂಶಗಳು ತೋರಿಸುತ್ತಿವೆ.
ಒಟ್ಟಿನಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕಬೇಕಾದ ಬವಣೆಗಳು ಸೃಷ್ಟಿಯಾಗುತ್ತಿದೆ, ಅದು ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ, ಮಾತ್ರವಲ್ಲದೆ ಮಹಿಳೆಯರು ಉದ್ಯೋಗ ನಿರ್ವಹಿಸುವ ಸ್ಥಳಗಳಲ್ಲಿಯೂ ಲೈಂಗಿಕ ಕೀಟಲೆಗಳು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೊಲೆ ಹೀಗೆ ಮಹಿಳೆಯೊಬ್ಬಳು ಮನೆಯಿಂದ ಹೊರಗಡೆ ಬಂದು ಮತ್ತೆ ತಮ್ಮ ಮನೆಗಳಿಗೆ ತಲಪುವ ತನಕ ಭಯದಿಂದಲೇ ಸಾಗಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ.

ಇತ್ತ ನಮ್ಮ ರಾಜ್ಯವೂ ಇಷ್ಟೊಂದು ಭೀತಿಯ ವಾತಾವರಣದಿಂದ ಮುಕ್ತವಾಗಿಲ್ಲ, ಮೈಸೂರಿನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಲೇ ಇದೆ.
ನಮ್ಮ ರಾಜ್ಯದಲ್ಲಿ ಕಳೆದ ಕೇವಲ ಏಳು ತಿಂಗಳಲ್ಲಿ 305 ರೇಪ್ ಕೇಸ್ ಪ್ರಕರಣಗಳು ಬೆಳಕಿಗೆ ಬಂದಿದೆ. ಅಂದರೆ ಪ್ರತಿ ತಿಂಗಳಿಗೆ 44 ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟೆಲ್ಲಾ ಆಗುತ್ತಿದ್ದರೂ ರಾಜ್ಯ ಸರಕಾರವು ಮಾತ್ರ
ಧೃತರಾಷ್ಟನಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದೆಯೇ ಎಂದು ಭಾಸವಾಗುತ್ತಿದೆ.
ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವ ನಮ್ಮ ಸರ್ಕಾರದ ಮಹಿಳಾ ವಿರೋಧಿ ಕ್ರಮವು ಖಂಡನೀಯ.
ನೊಂದ ಮತ್ತು ತುರ್ತು ಅಗತ್ಯವಿರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿದಂತೆ ಹಲವು ರೀತಿಯ ಸಹಾಯ ಒಂದೇ ಸೂರಿನ ಅಡಿಯಲ್ಲಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಕಲ್ಯಾಣ ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು .ಆದರೆ ಸರಕಾರ ಅದನ್ನು ಕಡೆಗಣಿಸಿದೆ. ಮಹಿಳೆಯರ ಸುರಕ್ಷತೆಯು ಸರಕಾರದ ಹೊಣೆಯಾಗಿದ್ದು ಅದು ತನ್ನ ಆಡಳಿತ ನಿರ್ವಹಣಾ ಜವಾಬ್ದಾರಿಯನ್ನರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಅಭಿಯಾನದ ಮೂಲಕ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷೆಯಾದ ಸಲಾಂ ಜಹಾನ್ ಮಾತನಾಡಿ ನಮ್ಮ ಅಭಿಯಾನದ ಉದ್ದೇಶಗಳು

  • ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸುವುದು.
  • ಮಹಿಳೆಯರಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು.
  • ಮಹಿಳೆಯರ ಸಂರಕ್ಷಣೆಯು ಸರಕಾರದ ಕರ್ತವ್ಯವಾಗಿದ್ದು, ಸರಕಾರಕ್ಕೆ ಅದರ ಹೊಣೆಗಾರಿಕೆಯನ್ನು ನೆನಪಿಸುವುದು.
  • ಮಹಿಳಾ ಸಬಲೀಕರಣದ ಸಲುವಾಗಿ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸುವುದು.

ಈ ಅಭಿಯಾನದ ಸಂದರ್ಭದಲ್ಲಿ
ಪತ್ರಿಕಾ ಗೋಷ್ಠಿ, ರ್ಯಾಲಿ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್ಸ್ ಗಳನ್ನು ಹಮ್ಮಿಕೊಳ್ಳುವುದು.

ಸೆಪ್ಟೆಂಬರ್ 18 ರಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ,
ಸೆಪ್ಟೆಂಬರ್ 19 ವೆಬಿನಾರ್ (ಸಮಾರೋಪ).ಹೀಗೆ ಮಹಿಳಾ ಜನಜಾಗೃತಿಗಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಸದಸ್ಯೆಯಾದ ಲುತ್ಫೆ ಮೈಮಾನ ಹಾಗೂ ಇನ್ನು ಮುಂತಾದವರು ಭಾಗವಹಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!