ವಾಟ್ಸಪ್ ಹೊಸ ಗೌಪ್ಯತಾ ನೀತಿ ವಿವಾದ: ಹಿಂಪಡೆಯಲು ಸರ್ಕಾರದ ಆದೇಶ

ತನ್ನ ಹೊಸ ವಿವಾದಾತ್ಮಕ ಗೌಪ್ಯತಾ ನೀತಿಯನ್ನು ಕೈಬಿಡುವಂತೆ ಸರ್ಕಾರವು ವಾಟ್ಸಪ್‌ಗೆ ಆದೇಶ ನೀಡಿದೆ ಎಂದು ವರದಿಯಾಗಿದೆ. ವಾಟ್ಸಪ್‌ನ ಈ ಬದಲಾವಣೆಗಳು ಭಾರತೀಯ ನಾಗರಿಕರ ಹಿತಾಸಕ್ತಿಗಳ ಸಂರಕ್ಷಿತ ಮೌಲ್ಯಗಳನ್ನು ಹಾಳುಮಾಡುವುದರ ಜೊತೆಗೆ ಗೌಪ್ಯತೆ, ದತ್ತಾಂಶ ಸುರಕ್ಷತೆ, ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತದೆ ಎಂದು ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮೇ ೧೮ ರಂದು ವಾಟ್ಸಾಪ್‌ಗೆ ಬರೆದ ಪತ್ರದಲ್ಲಿ ಈ ಮೇಲಿನ ಹೇಳಿಕೆಯನ್ನು ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್ ಆನ್‌ಲೈನ್ ವರದಿ ಮಾಡಿದೆ. ಸಚಿವಾಲಯದ ಪತ್ರಕ್ಕೆ ಏಳು ದಿನಗಳಲ್ಲಿ ತೃಪ್ತಿದಾಯಕ ಪ್ರತಿಕ್ರಿಯೆ ಬರದಿದ್ದರೆ ಕಾನೂನಿನ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಚಿವಾಲಯವು ಈ ವಿಷಯದ ಬಗ್ಗೆ ಕಠಿಣವಾದ ನಿಲುವನ್ನು ತೆಗೆದುಕೊಂಡಿದ್ದು, ಭಾರತೀಯ ಬಳಕೆದಾರರ ಮೇಲೆ “ಅನ್ಯಾಯದ” ನಿಯಮಗಳು ಮತ್ತು ಷರತ್ತುಗಳನ್ನು ಹೇರುವ ವಾಟ್ಸಪ್‌ನ ಈ ನವೀಕರಣ(ಅಪ್‌ಡೇಟ್) ಸಮಸ್ಯಾತ್ಮಕ ಮಾತ್ರವಲ್ಲದೆ ಬೇಜವಾಬ್ದಾರಿತನದಿಂದಲೂ ಕೂಡಿದೆ ಎಂದು ಮೂಲಗಳು ತಿಳಿಸಿವೆ.
ಸಮಸ್ಯೆಯನ್ನು ಬಗೆಹರಿಸಲು ಕಂಪನಿಯು ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ. “ಭವಿಷ್ಯದಲ್ಲಿ ಬ್ಯುಸಿನೆಸ್ ವಾಟ್ಸಪ್‌ನ ಹೊಸ ಆಯ್ಕೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ನಮ್ಮ ಗುರಿಯಾಗಿದೆ. ಈ ಅಪ್‌ಡೇಟ್‌ನಿಂದಾಗಿ ಮೇ ೧೫ ರಂದು ಯಾವುದೇ ಖಾತೆಗಳನ್ನು ಅಳಿಸಲಾಗಿಲ್ಲ ಮತ್ತು ಭಾರತದಲ್ಲಿ ಯಾರೂ ವಾಟ್ಸಾಪ್‌ನ ಕಾರ್ಯವನ್ನು ಕಳೆದುಕೊಂಡಿಲ್ಲ” ಎಂದು ಅವರು ತಿಳಿಸಿದ್ದಾರೆ.
“ ಈ ಅಪ್‌ಡೇಟ್ ನಿಂದಾಗಿ ಯಾವುದೆ ವ್ಯಕ್ತಿಯ ವೈಯಕ್ತಿಕ ಸಂದೇಶಗಳ ಗೌಪ್ಯತೆಯು ಉಲ್ಲಂಘನೆಯಾಗುವುದಿಲ್ಲ ಎಂದು ನಾವು ಮೊದಲೆ ಹೇಳಿದ್ದೆವು, ಈಗಲೂ ಅದನ್ನೇ ದೃಡೀಕರಿಸುತ್ತೇವೆ. ಜನರ ವೈಯಕ್ತಿಕ ಸಂದೇಶಗಳು ಮತ್ತು ಖಾಸಗಿ ಮಾಹಿತಿಯನ್ನು ನಾವು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ವಿವರಿಸಲು ನಾವು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ” ಎಂದು ವಾಟ್ಸಪ್ ವಕ್ತಾರರು ತಿಳಿಸಿದ್ದಾರೆ.
ಆದರೆ ಐಟಿ ಸಚಿವಾಲಯದ ಮೂಲಗಳು, “ಭಾರತೀಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ಸಾರ್ವಭೌಮ ಜವಾಬ್ದಾರಿಯನ್ನು ನಿರ್ವಹಿಸಲು, ಭಾರತದ ಕಾನೂನಿನ ಅಡಿಯಲ್ಲಿ ಸರ್ಕಾರವು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತದೆ” ಎಂದು ತಿಳಿಸಿವೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!