ವೋಟರ್ ಹೆಲ್ಪ್‌ಲೈನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಿ:ಸಿಇಓ ಬಿ.ಫೌಜಿಯಾ ತರನ್ನುಮ್

ಕೊಪ್ಪಳ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದವರು ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಅವರು ಮಂಗಳವಾರ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸ್ವೀಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ವಿಶೇಷ ನೋಂದಣಿ ಅಭಿಯಾನ-೨೦೨೧ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನವೆಂಬರ್ ೨೧ ಮತ್ತು ೨೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಗಳ ವರೆಗೆ ತಮ್ಮ ಹೆಸರುಗಳ ತಿದ್ದುಪಡಿಗೆ ಅವಕಾಶವಿದ್ದು, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದರ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್‌ಸೈಟ್‌ನ್ನು ನೋಡಿ ತಿಳಿದುಕೊಳ್ಳಿ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಚುನಾವಣೆ ಜಾಗೃತಿ ಕುರಿತು ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಮತದಾರರು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ತಮ್ಮ ಮತದಾನ ಮಾಡುವುದೇ ನಮ್ಮ ಉದ್ದೇಶವಾಗಿದೆ. ಮತದಾರರ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಹೆಚ್ಚಿನ ವಿಧ್ಯಾರ್ಥಿಗಳನ್ನು ಸೇರಿಸಿ ಉತ್ತಮ ರೀತಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ವಿಕಾಸ್ ಕಿಶೋರ ಸುರಳ್ಕರ್ ಅವರು ಮಾತನಾಡಿ, ಪ್ರತೀ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಈ ಸಲ ಆನ್‌ಲೈನ್ ರಿಜಿಸ್ಟ್ರೇಶನ್‌ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ತಮ್ಮ ಮನೆಯ ಸದಸ್ಯರು ಹಾಗೂ ಅಕ್ಕಪಕ್ಕದ ಊರಿನ ಮತ್ತು ಏರಿಯಾದ ಜನರಿಗೆ ಈ ಕುರಿತು ಮಾಹಿತಿ ನೀಡಿ ಯಾರಾದರೂ ತಮ್ಮ ಹೆಸರು ಬಿಟ್ಟು ಹೋಗಿದ್ದರೆ ಮತ್ತು ಸೇರಿಸುವುದಿದ್ದರೆ ಮತದಾರರ ಪಟ್ಟಿಯಲ್ಲಿ ಸೇರಿಸಿ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತ ಅತ್ಯಮೂಲ್ಯವಾಗಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ನಾವು ನಮ್ಮ ದೇಶದ ನಿಜವಾದ ಜವಾಬ್ದಾರಿಯುತ ಪ್ರಜೆಗಳಾಗಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಕೊಪ್ಪಳ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಮಲ್ಲಿಕಾರ್ಜುನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ದೊಡ್ಡಬಸಪ್ಪ ನೀರಲಕೇರಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರವಿಕುಮಾರ ಬಿ.ಜಿ., ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್, ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಚಾರ್ಯರು, ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!