ಶೋಕಿಗೆ ಪತ್ರಿಕೋದ್ಯಮ ವೃತ್ತಿ ಮಾಡುವವರು ತೊಲಗಲಿ: ಶಿವಾನಂದ ತಗಡೂರು

ಬಳ್ಳಾರಿ: ದೇಶದ ಮಹಾನ್ ಪತ್ರಕರ್ತರಾದ ಡಾ.ಬಿ.ಆರ್.ಅಂಬೇಡ್ಕರ್,‌ ಮಹಾತ್ಮ ಗಾಂಧೀಜಿ ಅವರು‌ ಸವೆಸಿದ ಹಾದಿಯಲ್ಲಿ ಸಾಗುತ್ತಿರುವ ನಾವುಗಳು ಬೇಜವಾಬ್ದಾರಿ, ಶೋಕಿಗೆ ವೃತ್ತಿ ಮಾಡುವವರು ಪತ್ರಿಕೋದ್ಯಮ ವೃತ್ತಿ ಬಿಟ್ಟು ಹೋಗುವುದು ಒಳ್ಳೆಯದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.

ಬಳ್ಳಾರಿ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವೇ ಮೊದಲು ಎಂಬ ಧಾವಂತದಲ್ಲಿ ಮಾನಹರಣ ಮಾಡುವಂತಹ ಸುದ್ದಿ ಪ್ರಕಟಿಸಬಾರದು, ಮಾನ ಕೊಡಲು ಸಾಧ್ಯವಿಲ್ಲದ್ದರೆ ಮಾನಹಾನಿ ಮಾಡುವಂತಹ ಯಾವುದೇ ಹಕ್ಕು ಪತ್ರಕರ್ತರಿಗೆ ಇಲ್ಲ. ಪತ್ರಕರ್ತರಿಗೆ ಸಮಾಜ ಕೊಡುವ‌ ಗೌರವಕ್ಕೆ ಚುಕ್ಕೆ ಬಾರದಂತೆ ನಡೆದುಕೊಳ್ಳಬೇಕು. ವೃತ್ತಿ ಬದ್ದತೆ ಉಳಿಸಿಕೊಳ್ಳದಿದ್ದರೆ ಹಾದಿ ಬೀದಿಗಳಲ್ಲಿ ಪತ್ರಕರ್ತರಿಗೆ ಛೀಮಾರಿ ಹಾಕುವಂತಹ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಇಂದು ಪತ್ರಿಕೋದ್ಯಮ ಅನೇಕ ಮಜಲು ಬದಲಾಯಿಸಿದೆ. ಪತ್ರಕರ್ತರಿಗೆ ಈ ಹಿಂದಿನ ಬದ್ದತೆ ಮತ್ತು ಇವತ್ತಿಗೂ ಅನೇಕ ಬದಲಾವಣೆ ಆಗಿದೆ. ಪತ್ರಿಕಾ ರಂಗ ಇದೀಗ ಉದ್ಯಮವಾಗಿದೆ. ಪತ್ರಿಕೋದ್ಯಮ ಸೇರಿದಂತೆ ಅನೇಕ ರಂಗಗಳು ಉದ್ಯಮವಾಗಿವೆ. ಈ ಹಿಂದೆ ನಾಲ್ಕೈದು ದಿನದ ಹಿಂದಿನ ಸುದ್ದಿ ತಾಜಾ ಸುದ್ದಿ ಆಗಿತ್ತು. ಆದರೆ ಈಗ ಕ್ಷಣ ಕ್ಷಣದ ಸುದ್ದಿ ಕೈಬೆರಳ ತುದಿಯಲ್ಲಿಯೇ ಸಿಗುವಂತೆ ಪತ್ರಿಕೋದ್ಯಮ ಬೆಳೆದಿದೆ. ಈಗ ಸುದ್ದಿಗೆ ಹುಡುಕಾಟ ನಡೆಸಬೇಕಿಲ್ಲ, ನಾವು ಇರುವಲ್ಲಿಯೇ ರಾಶಿ ರಾಶಿ ಸುದ್ದಿ ಬರುತ್ತವೆ. ಅದು ಸರಿಯೋ ತಪ್ಪೋ ಒಕ್ಕಣೆ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪತ್ರಕರ್ತರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಘನತೆ, ಗೌರವ ಕಾಪಾಡಿಕೊಂಡು ಒಳ್ಳೆಯ ಪತ್ರಕರ್ತರಾಗಬೇಕು. ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆಯುವುದು ಹೆಮ್ಮೆಯ ಸಂಗತಿ ಎಂದ ಅವರು, ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ‌‌ಅರವತ್ತುಕ್ಕೂ ಹೆಚ್ಚು ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ತಲಾ ಐದು ಲಕ್ಷರೂ ಪರಿಹಾರ ಕೊಡಿಸುವಂತಹ ಕೆಲಸ ಮಾಡಿದ್ದು, 45ಕ್ಕೂ ಹೆಚ್ಚು ಮೃತರಿಗೆ ತಲಾ 5 ಲಕ್ಷರೂ ಪರಿಹಾರ ಕೊಡಿಸಿದ್ದೇವೆ. ಆಯಷ್ಯಾನ್ ಭಾರತ ಆರೋಗ್ಯ ಕಾರ್ಡ್ ಶೀಘ್ರವೇ ಸಂಘದ ಎಲ್ಲಾ ಸದಸ್ಯರಿಗೆ ಸಿಗಲಿದೆ ಎಂದು ತಿಳಿಸಿದರು.

ಕುಟುಂಬದ ಸದಸ್ಯರಂತೆ ಕೆಲಸ ಮಾಡಿ

ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಲ್ಲಿ ಒಗ್ಗಟ್ಟು ಮತ್ತು ಸಂಘಟನೆ ಬೇಕು. ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಬೇಕು. ಸಂಘವಿದ್ದರೇ ಮಾತ್ರ ನಾವು ಎಂಬ ಭಾವನೆ ಬೆಳಸಿಕೊಳ್ಳಬೇಕು. ಮೃತ ಪತ್ರಕರ್ತರಿಗೆ ಪರಿಹಾರ ಕೊಡಿಸಿದ್ದು ಸಂಘದ ಮಹಾನ್ ಕಾರ್ಯವಾಗಿದೆ. ಸ್ವಪ್ರತಿಷ್ಠೆ ತ್ಯಜಿಸಿ ತ್ಯಾಗದ ಮನೋಭಾವ ಬೆಳಸಿಕೊಳ್ಳಬೇಕು. ಅವಕಾಶಗಳು ಹುಡುಕಿಕೊಂಡು ಬರುವಂತೆ ನಮ್ಮ ನಡವಳಿಕೆ ಇರಬೇಕು. ಹಣ ಮಾಡಲು ಪತ್ರಿಕೋದ್ಯಮಕ್ಕೆ ಬರಬೇಡಿ, ಯೂಟ್ಯೂಬ್ ಚಾನಲ್ ಗೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು.

ಸುಳ್ಳಿನ ಜೊತೆಗೆ ಎಂದಿಗೂ . ರಾಜಿಯಿಲ್ಲ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಪ್ರಸ್ತಾವಿಕವಾಗಿ ಮಾತನಾಡಿ, ಸತ್ಯ ಪರವಾಗಿ‌ ನಾನು ಸದಾ ಇರುತ್ತೇನೆ. ಸುಳ್ಳಿನ ಜೊತೆಗೆ ಎಂದಿಗೂ ರಾಜಿಯಿಲ್ಲ. ಪತ್ರಕರ್ತರಿಗೆ ಸಿಗಬೇಕಾದಂತಹ ಸೌಲಭ್ಯ ದೊರಕಿಸಲು ನಿರಂತರವಾಗಿ ಹೋರಾಟ ಮಾಡುತ್ತೇನೆ ಎಂದ ಅವರು ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಬೇಕು. ಪತ್ರಕರ್ತರಿಗೆ ಸಂಬಳದ ಜೊತೆ ಮಾಶಾಸನ ನೀಡುವಂತಹ ಕೆಲಸ ಮಾಡಬೇಕೆಂದು ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದರು.

ಪತ್ರಕರ್ತರಿಗೆ ನಿವೇಶನ ಭರವಸೆ

ಬಳ್ಳಾರಿ ಕ್ಷೇತ್ರದ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗ ಚೆನ್ನಾಗಿದ್ದರೆ ದೇಶ ಅಭಿವೃದ್ದಿ ಕಾಣುತ್ತದೆ. ಅಲ್ಲದೇ ರಾಜಕಾರಣಿಗಳು ಸುಧಾರಿಸುತ್ತಾರೆ. ಇಂದು ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ. ಹೀಗಾಗಿ ಬಳ್ಳಾರಿಯ ಪತ್ರಕರ್ತರಿಗೆ ನಿವೇಶನ ಅಥವಾ ಮನೆಗಳನ್ನು ನೀಡಲು ಬದ್ದವಾಗಿದ್ದೇವೆ. ಸಿಎಂ ಅಥವಾ ವಸತಿ ಸಚಿವರ ಹತ್ತಿರ ಬೇಡಿಕೊಂಡು ಬಂದಾರೂ ಮನೆ ಕೊಡುತ್ತೇನೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ತಪ್ಪುಗಳನ್ನು ತಿದ್ದುವ ಕೆಲಸ ಮಾಡಿ

ಅಪರ ಜಿಲ್ಲಾಧಿಕಾರಿ ಮಂಜುನಾಥ ಮಾತನಾಡಿ, ಮಾಧ್ಯಮ ಕೇವಲ ತಪ್ಪುಗಳನ್ನು ಹುಡುಕುವ ಕೆಲಸ ಮಾಡದೇ ಸರಿಪಡಿಸುವ ಕೆಲಸ ಮಾಡಬೇಕಿದೆ. ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ನಡೆಯುವಂತಹ ತಪ್ಪುಗಳನ್ನು ತಿದ್ದುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದೆ ಎಂದರು.

ಮಾಜಿ ಶಾಸಕರು ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ಅವರು ಸನ್ಮಾನ ಸ್ವೀಕರಿಸಿ ಶುಭಾಶಯ ಕೋರಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಜೆ.ಸಿ‌.ಲೋಕೇಶ್ ಮಾತನಾಡಿದರು. ಕಲ್ಯಾಣ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜೆ.ರಾಮಲಿಂಗಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಗನಮೋಹನರೆಡ್ಡಿ, ಮೊ.ಕ.ಮಲ್ಲಯ್ಯ,ರಾಮವ್ವ ಜೋಗತಿ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!