ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಿ: ನ್ಯಾ.ಬಿ.ಎಸ್.ರೇಖಾ

ಕೊಪ್ಪಳ: ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್-೧೯ ಎರಡನೇ ಅಲೆಯಿಂದ ಸಾರ್ವಜನಿಕರು ಅಪಾರ ತೊಂದರೆಗೆ ಒಳಗಾಗಿದ್ದಾರೆ. ಸೋಂಕು ಹರಡುವಿಕೆಗೆ ವಯಸ್ಸಿನ ಭೇದವಿಲ್ಲವಾದ್ದರಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಿ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಅಧ್ಯಕ್ಷರಾದ ಬಿ.ಎಸ್.ರೇಖಾ ಹೇಳಿದರು.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರದಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕೋವಿಡ್-೧೯ ಹರಡುವಿಕೆ ನಿಯಂತ್ರಣ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ಹರಡುವಿಕೆಗೆ ನಿರ್ದಿಷ್ಟ ವಯೋಮಿತಿಯ ವರ್ಗೀಕರಣವಿಲ್ಲ. ಮಗುವಿನಿಂದ ವೃದ್ಧರವರೆಗೂ ಎಲ್ಲ ವಯೋಮಾನದವರಿಗೂ ಸೋಂಕು ಬಾಧಿಸುತ್ತಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ನಗರ ಸ್ಥಳೀಚಿi ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಹೆಚ್ಚಿನ ಜನದಟ್ಟಣೆ ಸೇರದಂತೆ ಹಾಗೂ ಮಾರುಕಟ್ಟೆ, ಸಂತೆಗಳಲ್ಲಿ ಜನಸಚಿದಣಿ ಉಂಟಾಗದಂತೆ, ಜನರು ಗುಂಪುಗೂಡಿ ಓಡಾಡದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ನಗರದ ಮುಖ್ಯ ರಸ್ತೆಗಳ ಜೊತೆಗೆ ಬಡಾವಣೆಗಳ ಒಳ ರಸ್ತೆಗಳಲ್ಲಿ, ಸಾರ್ವಜನಿಕ ಮೈದಾನ, ಉದ್ಯಾನವನಗಳಲ್ಲಿ ಹೆಚ್ಚಿನ ಜನರು ಸೇರದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಬೇಕಾದ ಅಗತ್ಯ ಬೀಟ್ ವ್ಯವಸ್ಥೆಯನ್ನು ಕಲ್ಪಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಲಕ್ಷಣಗಳುಳ್ಳ ರೋಗಿಗಳನ್ನು ಗುರುತಿಸಿ ಅಂತಹವರಿಗೆ ಪರೀಕ್ಷೆಗೊಳಪಡಿಸಬೇಕು. ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚುಗೊಳಿಸಿ, ಸೋಂಕು ದೃಢಪಟ್ಟವರನ್ನು ಆಸ್ಪತ್ರೆಯಲ್ಲಿ ಅಥವಾ ಹೋಂ ಐಸೋಲೇಷನ್‌ಗೆ ಒಳಪಡಿಸಬೇಕು. ಹೋಂ ಐಸೋಲೇಷನ್‌ನಲ್ಲಿರುವ ರೋಗಿಯ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವುದಲ್ಲದೆ, ಸೋಂಕಿತ ರೋಗಿಯು ಪೂರ್ಣ ಗುಣಮುಖರಾಗುವವರೆಗೂ ಮನೆಯಿಂದ ಆಚೆ ಬರದಂತೆ, ಇತರರ ಸಂಪರ್ಕಕ್ಕೆ ಬರದಂತೆ ನಿಗಾ ವಹಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎ.ಎನ್.ವೇಣುಗೋಪಾಲ ಗೌಡ ಅವರ ನಿರ್ದೇಶನದಂತೆ ಕೋವಿಡ್-೧೯ ಕುರಿತು ಹಾಗೂ ಉಚಿತ ಕಾನೂನು ಸಲಹೆಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಗಳನ್ನು ಜಿಲ್ಲಾಡಳಿತದ ಕೋವಿಡ್-೧೯ ನಿರ್ವಹಣೆಗೆ ಸಂಬಂಧಿಸಿದ ವಾಟ್ಸಪ್ ಗ್ರೂಪ್‌ಗಳಿಗೆ ಸೇರ್ಪಡೆಗೊಳಿಸಬೇಕು. ಇದರಿಂದ ಸಹಾಯವಾಣಿಗೆ ಬರುವ ದೂರುಗಳನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಲು, ಅಗತ್ಯ ಸಹಾಯವನ್ನು ನೀಡಲು ಅನುಕೂಲವಾಗುತ್ತದೆ ಎಂದು ಅವರು ಅಪರ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನಗರಸಭೆ ವತಿಯಿಂದ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಮೇಲೆ ನಿಗಾ ವಹಿಸಬೇಕು. ಸಾರ್ವಜನಿಕರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಜಾಗೃತಿ ಮೂಡಿಸಬೇಕು. ಪ್ರತಿನಿತ್ಯ ಕಸ ಸಂಗ್ರಹಣೆಗೆ ತೆರಳುವ ವಾಹನಗಳಲ್ಲಿ ಕೋವಿಡ್-೧೯ ಪರೀಕ್ಷೆ, ಸುರಕ್ಷತಾ ಕ್ರಮಗಳ ಪಾಲನೆ, ಲಸಿಕೆ ಹಾಕಿಸಿಕೊಳ್ಳುವ ಅನುಕೂಲದ ಬಗ್ಗೆ ಹಾಡು ಅಥವಾ ಸಚಿದೇಶದ ಮೂಲಕ ಜಾಗೃತಿ ಮೂಡಿಸಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೋವಿಡ್-೧೯ ಕುರಿತು ಧ್ವನಿ ಮುದ್ರಿಕೆಯನ್ನು ತಯಾರಿಸಿದ್ದು ಅದನ್ನು ಕೂಡ ನಗರಸಭೆಯ ಕಸ ವಿಲೇವಾರಿ ವಾಹನನಗಳಲ್ಲಿ ಬಳಸಿಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಸರ್ಕಾರದ ಆದೇಶದಂತೆ ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಬೇಕಾಗಿದ್ದು, ಜಿಲ್ಲಾ ವಕೀಲರ ಸಂಘದ ಸದಸ್ಯರಲ್ಲಿ ಬಹಳಷ್ಟು ಸದಸ್ಯರು ಇದುವರೆಗೂ ಲಸಿಕೆ ಪಡೆದಿಲ್ಲ. ಆದ್ದರಿಂದ ಅವರಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಿ. ಜಿಲ್ಲೆಯಲ್ಲಿ ಯಾರೋಬ್ಬರೂ ಲಸಿಕೆಯಿಂದ ವಂಚಿತರಾಗಬಾರದು. ಎಲ್ಲ ಭಾಗದ, ಗ್ರಾಮಗಳ ಜನರಿಗೂ ಲಸಿಕೆ ದೊರೆಯಬೇಕು. ಲಸಿಕೆ ಕೇಂದ್ರಗಳಲ್ಲಿಯೂ ಹೆಚ್ಚಿನ ಜನದಟ್ಟಣೆ ಸೇರದಂತೆ ಬ್ಯಾಚ್‌ಗಳನ್ನು ಮಾಡಿ, ಒಂದು ಸಮಯಕ್ಕೆ ನಿರ್ದಿಷ್ಟ ಜನರಿಗೆ ಲಸಿಕೆಯನ್ನು ನೀಡಿ. ಲಸಿಕೆ ಪಡೆದ ನಂತರ ವ್ಯಕ್ತಿಯು ಸ್ವಲ್ಪ ಕಾಲ ಅಲ್ಲಿಯೇ ಇರಬೇಕಾಗುವುದರಿಂದ ಹೆಚ್ಚಿನ ಸ್ಥಳಾವಕಾಶವಿರುವ ಕಟ್ಟಡಗಳಲ್ಲಿ ಲಸಿಕೆಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಮಾತನಾಡಿ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಜನಸಚಿದಣಿ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ ೧೪೪ ನ್ನು ಜಾರಿಗೊಳಿಸಲಾಗಿದೆ. ಆರ್‌ಟಿಪಿಸಿಆರ್, ರ‍್ಯಾಟ್ ಸೇರಿದಂತೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಲಸಿಕೆ ದಾಸ್ತಾನು ಆಧಾರದಲ್ಲಿ ಇದುವರೆಗೂ ಲಸಿಕೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಲಸಿಕೆ ಪೂರೈಕೆಯಾಗುತ್ತಿದ್ದು, ಲಸಿಕೆ ಬಂದ ನಂತರ ಇನ್ನೂ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಹೋಂ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾ ವಹಿಸಲು ಕ್ವಾರಂಟೈನ್ ವಾಚ್ ಎಂಬ ಆಪ್‌ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ಆಕ್ಸಿಜನ್ ಉತ್ಪಾದನಾ ಘಟಕ ನಮ್ಮ ಜಿಲ್ಲೆಯಲ್ಲಿಯೇ ಇರುವುದರಿಂದ ಇದುವರೆಗೂ ಅಂತಹ ಸಮಸ್ಯೆ ಬಂದಿಲ್ಲ. ಆದಾಗ್ಯೂ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಕಾನ್ಸನ್ಂಟ್ರೇಟರ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಗ್ರಾಮದ ಸಮುದಾಯ ಭವನದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ೪ ರಿಂದ ೫ ಬೆಡ್‌ಗಳ ವ್ಯವಸ್ಥೆ ಮಾಡಿ ಗ್ರಾಮಗಳಲ್ಲಿಯೇ ಅಗತ್ಯವಿರುವ ರೋಗಿಗೆ ಆಕ್ಸಿಜನ್ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಗ್ರಾಮಗಳಿಂದ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ಸಂಭವಿಸುವ ಮರಣ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಡಿವೈಎಸ್‌ಪಿ ಗೀತಾ ಬೇನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆ.ಎಮ್.ಎಫ್.ಸಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಸದಸ್ಯ ಕಾರ್ಯದರ್ಶಿ ಹರೀಶ ಕುಮಾರ ಎಮ್., ನಗರಸಭೆ ಪೌರಾಯುಕ್ತರಾದ ಮಂಜುನಾಥ ಟಿ.ಎ., ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ವಿ.ಸಜ್ಜನ, ವಕೀಲರಾದ ರವಿ ಎಸ್.ಬೆಟಗೇರಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!