ಸುಲಲಿತವಾಗಿ ನಡೆದ SSLC ಪರೀಕ್ಷೆ:ರಾಜ್ಯಾದ್ಯಂತ ಪರೀಕ್ಷೆ ಬರೆದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು

ಬೆಂಗಳೂರು ವಿದ್ಯಾರ್ಥಿಗಳ ಕಲಿಕಾ ಭವಿಷ್ಯದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರದಂದು ರಾಜ್ಯಾದ್ಯಂತ ಆರಂಭಗೊಂಡಿತ್ತು. ಎಲ್ಲೆಡೆ ವಿದ್ಯಾರ್ಥಿಗಳಲ್ಲಿ ನಿರೀಕ್ಷೆಗೂ ಮೀರಿದ ಉತ್ಸಾಹ ಕಂಡು ಬಂದಿತ್ತು. ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಸೋಮವಾರದಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ಸುಲಲಿತವಾಗಿ ನಡೆಯಿತು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ನೀರಿನ ಬಾಟಲ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದ್ದು , ಸಾಮಾಜಿಕ ಅಂತರ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದಂತೆ ಅವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಾಲೆಯ ಹೊರಗೆ ನಿಂತು ಪರಿವೀಕ್ಷಕರು ಗುಲಾಬಿ ಹೂಗಳನ್ನು ನೀಡಿ ಅವರ ಬೆನ್ನು ತಟ್ಟಿ ಶುಭ ಹಾರೈಸಿದ್ದು ಕಂಡು ಬಂತು.
ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಬೆಂಗಳೂರಿನ ವಿಜಯಾ ಕಾಲೇಜ್ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಎಲ್ಲರಿಗೂ ನಿರ್ಭೀತಿ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು ಶುಭ ಹಾರೈಸಿದರು. ಕೆಲವು ಪರೀಕ್ಷಾ ಕೇಂದ್ರಗಳು ದೀಪಾಲಂಕಾರದಿಂದ ಸಿಂಗಾರಗೊಂಡಿದ್ದರೆ, ಇನ್ನು ಕೆಲವೆಡೆ ತಳಿರು ತೋರಣ, ಸ್ವಾಗತ ಕಮಾನುಗಳನ್ನು ಕಟ್ಟಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಸ್ವಾಗತಿಲಾಯಿತು.
ಗಡಿ ಭಾಗದಲ್ಲಿ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದರೆ , ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ ೯ ಗಂಟೆಯ ವೇಳೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆಯೇ ಯಾವುದೇ ಅಳುಕಿಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಅವರನ್ನು ಆಶೀರ್ವದಿಸಿ ಕಳುಹಿಸಿದ್ದು ಕಂಡು ಬಂತು. ಈಗಾಗಲೇ ಸಾಮಾಜಿಕ ಜಾಲ ತಾಣ ಹಾಗೂ ಶಾಲೆಗಳಲ್ಲಿ ಒಎಂಆರ್ ಉತ್ತರ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಣುಕು ಪರೀಕ್ಷೆಯನ್ನು ಕೂಡ ಮಾಡಲಾಗಿತ್ತು.
ಹಾಗಾಗಿ ವಿದ್ಯಾರ್ಥಿಗಳು ನಗು ಮೊಗದಿಂದಲೇ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದು ಕಂಡು ಬಂತು. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಬೇಡ ಎಂದು ತಿಳಿಸುವ ಜತೆಗೆ ಪ್ರಶ್ನೆಗಳು ಕೂಡ ಸರಳವಾಗಿರುತ್ತದೆ ಎಂದು ತಿಳಿಸುವುದರ ಹಿನ್ನೆಲೆಯಲ್ಲಿ ಎಲ್ಲರೂ ಉತ್ತೀರ್ಣರೇ ಎಂದು ಘೋಷಿಸಿರುವುದರಿಂದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವ ಗುರಿಯಲ್ಲಿದ್ದಾರೆ.
ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಕಂಡು ಬಂದಿತ್ತು. ಎಲ್ಲರೂ ಪರಸ್ಪರ ತಮ್ಮ ಸ್ನೇಹಿತರೊಂದಿಗೆ ಹೊಸ ಅನುಭವದಲ್ಲಿ ಪರೀಕ್ಷೆ ಬರೆದಿದ್ದುರ ಬಗ್ಗೆ ಮಾತುಗಳನ್ನಾಡುತ್ತಿದ್ದುದು ಕಂಡು ಬಂತು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!