12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ
ನವದೆಹಲಿ: ‘ಎರಡನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಹಿಗಾಗಿ ಸಿಬಿಎಸ್ಇಯ ೧೨ ನೇ ತರಗತಿಯ ಪರೀಕ್ಷೆಗಳನ್ನು ನಡೆಸಬಾರದು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
ಕೋವಿಡ್-೧೯ ಪಿಡುಗಿನ ಕಾರಣದಿಂದಾಗಿ ಮುಂದೂಡಲಾಗಿರುವ ೧೨ನೇ ತರಗತಿ ಪರೀಕ್ಷೆಗಳ ಕುರಿತು ಚರ್ಚಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಭಾನುವಾರ ಮಹತ್ವದ ಸಭೆ ಕರೆದಿತ್ತು.
’ಈಗಾಗಲೇ ಒತ್ತಡದಲ್ಲಿರುವ ಮಕ್ಕಳು ಸುರಕ್ಷತಾ ಕಿಟ್ಗಳನ್ನು ಧರಿಸಿ ಪರೀಕ್ಷೆ ಬರೆಯಬೇಕು ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಸರ್ಕಾರ ಸೂಕ್ಷ್ಮತೆಯಿಲ್ಲದಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ನಮಗೆ ಬಹಳ ಮುಖ್ಯ. ಈ ಹಿಂದಿನ ಘಟನೆಗಳಿಂದ ನಾವು ಏಕೆ ಪಾಠ ಕಲಿಯುತ್ತಿಲ್ಲ?’ ಎಂದು ಪ್ರಿಯಾಂಕಾ ಗಾಂದಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
‘ಕೊರೊನಾದ ಹೊಸ ತಳಿಯು ಮಕ್ಕಳ ಮೇಲೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂಬುದು ತಿಳಿದುಬಂದಿದೆ. ಹೀಗಿರುವಾಗ, ಕೊರೊನಾ ಪ್ರಸರಣಕ್ಕೆ ನಾವು ಇನ್ನಷ್ಟು ಅವಕಾಶ ನೀಡಿದಂತೆ ಆಗುತ್ತದೆ. ಮಕ್ಕಳು ಬಹಳ ಒತ್ತಡದಲ್ಲಿದ್ದಾರೆ. ಈ ನಡುವೆ ಸರ್ಕಾರವು ಪರೀಕ್ಷೆಗೆ ಸಂಬಂಧಿಸುವ ನಿರ್ಧಾರವನ್ನು ಪ್ರಕಟಿಸುವಲ್ಲಿಯೂ ವಿಳಂಬ ಮಾಡುತ್ತಿದೆ’ ಎಂದು ಪ್ರಿಯಾಂಕಾ ಗಾಂದಿ ಟೀಕಿಸಿದ್ದಾರೆ.
‘ಮಕ್ಕಳ ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಶಿಕ್ಷಣ ವ್ಯವಸ್ಥೆಯು ಮಕ್ಕಳ ಆರೋಗ್ಯದ ಕುರಿತಾಗಿ ಸಂವೇದನೆಯಿಂದ ವರ್ತಿಸಬೇಕು’ ಎಂದು ಪ್ರಿಯಾಂಕಾ ಗಾಂದಿಒತ್ತಾಯಿಸಿದರು.