ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಗಡ್ಕರಿ ಯುಗಾದಿ ಕೊಡುಗೆ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 255.88 ಕೋಟಿ

ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 255.88 ಕೋಟಿ ಭರ್ಜರಿ ಕೊಡುಗೆ ನೀಡಿದ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪರಿಕಲ್ಪನೆಯಂತೆ ಈಗಿರುವ ಬೀದರ್-(ಜೇವರ್ಗಿ) ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 (ಎ) ಅನ್ನು ಜೇವರ್ಗಿಯಿಂದ ಮಸ್ಕಿವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಹಿಂದುಳಿದ ಭಾಗಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣದ ಪರಿಕಲ್ಪನೆಯಂತೆ ಹೆದ್ದಾರಿಗಳು ದೇಶದ ಜನರ ಜೀವನಾಡಿಯಾಗಿವೆ. ಈಗಿರುವ ದ್ವಿಪಥ ರಸ್ತೆಯನ್ನು ಲಿಂಗಸೂರು ತಾಲ್ಲೂಕಿನ ಮೂಡಬಾಳ ಕ್ರಾಸ್‌ನಿಂದ ಸಿಂಧನೂರು, ಸಿರಗುಪ್ಪ ಮೂಲಕ ಬಳ್ಳಾರಿವರೆಗೆ ಚತುಷ್ಪಥ ರಸ್ತೆ ವಿಸ್ತರಣೆಗೆ 255.88 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಈಗಿರುವ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಟ್ಟಣೆ ಮತ್ತು ಮಳೆಗಾಲದಲ್ಲಿ ಮುಳುಗುವುದರಿಂದ ಬೆಂಗಳೂರಿಗೆ ತೆರಳಲು ಪರ್ಯಾಯ ಮಾರ್ಗದ ರಸ್ತೆ ಇದಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ನಾವು ಪ್ರಸ್ತಾವ ಸಲ್ಲಿಸಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರ ಅನುಮೋದನೆ ನೀಡಿರುವುದು ಶ್ಲಾಘನೀಯ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿಂಧನೂರು, ಮಸ್ಕಿ, ಸಿರಗುಪ್ಪ ಕ್ಷೇತ್ರಗಳ ಅಭಿವೃದ್ಧಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಜೇವರ್ಗಿ, ಮುದಗಲ್, ಲಿಂಗಸ್ಗೂರು, ಸಿಂಧನೂರು, ಮಸ್ಕಿ, ಶಿರಗುಪ್ಪ, ಬಳ್ಳಾರಿ ಮೂಲಕ ರಾಜಧಾನಿ ತಲುಪಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸರ್ವೋತೋಮುಖ ಅಭಿವೃದ್ಧಿಗೆ ಬದ್ಧವಾಗಿರುವ ಕೇಂದ್ರ ಸರ್ಕಾರ ರೈಲ್ವೆ, ಹೆದ್ದಾರಿ, ಗ್ರಾಮೀಣ ರಸ್ತೆ, ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸ ಶೆಕೆ ಮೂಡಿಸಿದೆ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!