ಸಾಮ್ರಾಜ್ಯಶಾಹಿ ಶಕ್ತಿಗಳು ಅಫ್ಘಾನಿಸ್ತಾನದಿಂದ ಪಾಠ ಕಲಿಯಲಿ ಸಯ್ಯದ್ ಸಾದತುಲ್ಲಾ ಹುಸೈನಿ

ಅಫ್ಘಾನಿಸ್ತಾನದ ಪ್ರಸಕ್ತ ರಾಜಕೀಯ ಬದಲಾವಣೆ ಹಲವಾರು ವರ್ಷಗಳಿಂದ ಆ ರಾಷ್ಟ್ರದಲ್ಲಿ ನೆಲೆನಿಂತಿದ್ದ ಅಶಾಂತಿ ಹಾಗೂ ರಕ್ತಪಾತಕ್ಕೆ ತಿಲಾಂಜಲಿಯಿಟ್ಟು ಅಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಸ್ಥಾಪಿಸಲು ಸಾಧ್ಯವಾಗಬಹುದೆಂದುರಾಷ್ಟ್ರಾಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರಾಧ್ಯಕ್ಷರಾದ ಸಯ್ಯದ್ ಸಾದತುಲ್ಲಾ ಹುಸೈನಿ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ರಾಜಕೀಯಬದಲಾವಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ಅವರು ಈ ರೀತಿ ಪ್ರತಿಕ್ರಯಿಸಿದ್ದಾರೆ.
ಎರಡು ದಶಕಗಳ ಹಿಂದೆ ವಸಾಹತುಶಾಹಿ ಶಕ್ತಿಗಳು ಸೈನಿಕ ಕಾರ್ಯಾಚರಣೆಯ ಮೂಲಕ ಅಫ್ಘಾನಿಸ್ತಾನ ಸರಕಾರವನ್ನು ಬುಡಮೇಲು ಗೊಳಿಸಿ ಅಮಾಯಕ ನಾಗರಿಕರ ಮೇಲೆ ಅಮಾನವೀಯ ರೀತಿಯಲ್ಲಿ ಕ್ರೂರ ಆಕ್ರಮಣಗಳನ್ನು ನಡೆಸಿ ನಗರಗಳಲ್ಲಿ ಬಾಂಬ್ ಸ್ಪೋಟ ಹಾಗೂ ರೈಡುಗಳನ್ನು ನಡೆಸಿ ಆಫ್ಘಾನಿಗಳ ಮೇಲೆ ವಿದೇಶಿ ಶಕ್ತಿಗಳ ಹಿತಾಸಕ್ತಿಗಳನ್ನು ಹೇರುವ ನಿರಂತರ ಪ್ರಯತ್ನ ನಡೆಸಿರುವುದು ಇತ್ತೀಚಿನ ಕಾಲದಲ್ಲಿ ನಡೆದ ಅತ್ಯಂತ ಹೇಯ ಕೃತ್ಯವಾಗಿದೆ.
ಅಫ್ಘಾನ್‌ ಜನತೆಯ ಧೀರೋದಾತ್ತ ಹೋರಾಟದ ಕಾರಣದಿಂದ ಅವರಿಗೆ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ತಮ್ಮ ರಾಷ್ಟ್ರದಿಂದ ಹೊರದಬ್ಬಲು ಸಾಧ್ಯವಾಯಿತು ಎಂಬುದು ಸಂತೋಷದ ಸಂಗತಿಯಾಗಿದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಈ ಘಟನೆಯಿಂದ ಪಾಠ ಕಲಿತು ಇನ್ನು ಮುಂದೆ ಬಡರಾಷ್ಟ್ರಗಳ ವಿಷಯಗಳಲ್ಲಿ ಅನೈತಿಕ ಹಾಗೂ ಅನಗತ್ಯ ಹಸ್ತಕ್ಷೇಪ ನಡೆಸುವುದರಿಂದ ಶಾಶ್ವತವಾಗಿ ದೂರ ನಿಲ್ಲಬೇಕೆಂದು ಜಮಾಅತ್ ರಾಷ್ಟ್ರಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.
ಐಕ್ಯರಾಷ್ಟ್ರಸಭೆ ಹಾಗೂ ಜಾಗತಿಕ ಸಮೂಹ ಇದರಿಂದ ಪಾಠ ಕಲಿತು ಜಗತ್ತಿನ ಬೃಹತ್ ಶಕ್ತಿಗಳೆಂದು ಕೊಚ್ಚಿಕೊಳ್ಳುವ ರಾಷ್ಟ್ರಗಳು ಬಲಹೀನ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ತಡೆಯಲು ಶಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ. ಯಾವುದೇ ಹಿಂಸೆ, ರಕ್ತಪಾತವಿಲ್ಲದೇ ಶಾಂತಿಯುತವಾಗಿ ಅಫ್ಘಾನಿಸ್ತಾನದ ಆಡಳಿತ ತಾಲಿಬಾನ್ ವಶವಾಗಿರುವುದು ಹರ್ಷದಾಯಕ ಹಾಗೂ ಆಶಾದಾಯಕ ಬೆಳವಣಿಗೆಯಾಗಿದೆ. ಜಗತ್ತಿನ ಎಲ್ಲ ಕಣ್ಣುಗಳು ಈಗ ತಾಲಿಬಾನಿನ ಮೇಲಿದೆ. ಅವರ ವರ್ತನೆ ಹಾಗೂ ಕಾರ್ಯಚಟುವಟಿಕೆಗಳನ್ನು ಜಗತ್ತು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇಸ್ಲಾಮಿನ ಪರೋಪಕಾರ ಹಾಗೂ ಕಾರುಣ್ಯದಿಂದ ಕೂಡಿದ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಗತ್ತಿಗೆ ತೋರಿಸಿ ಕೊಡಲು ಉತ್ತಮ ಅವಕಾಶ ತಾಲಿಬಾನಿಗೆ ಲಭಿಸಿದೆ ಎಂದು ರಾಷ್ಟ್ರಾಧ್ಯಕ್ಷರು ತಾಲಿಬಾನ್ ನಾಯಕರ ಗಮನ ಸೆಳೆದಿದ್ದಾರೆ. ಇಸ್ಲಾಮ್ ಶಾಂತಿ ಮತ್ತು ಸುಭಿಕ್ಷೆಯನ್ನು ಪ್ರತಿಪಾದಿಸುವ ಸಿದ್ಧಾಂತವಾಗಿದೆ ಎಂದು ಜಗತ್ತಿಗೆ ತೋರಿಸಿ ಕೊಡಲು ತಾಲಿಬಾನಿಗೆ ಸಾಧ್ಯವಾಗಬೇಕು ಎಂದು ಜಮಾಅತ್ ಬಯಸುತ್ತದೆ. ಇಸ್ಲಾಮ್ ಎಲ್ಲರಿಗೂ ವಿಶ್ವಾಸ ಸ್ವಾತಂತ್ರ್ಯವನ್ನು ಕಲ್ಪಿಸುವುದರೊಂದಿಗೆ ಅಲ್ಪಸಂಖ್ಯಾತರ ಸಹಿತ ಎಲ್ಲ ಮಾನವರ ಪ್ರಾಣ ಮತ್ತು ಸೊತ್ತಿನ ಸಂರಕ್ಷಣೆಯನ್ನು ಅದು ಗಂಭೀರವಾಗಿ ಪರಿಗಣಿಸುತ್ತದೆ. ಮಹಿಳೆಯರ ಹಕ್ಕುಗಳ ಬಗ್ಗೆ ಇಸ್ಲಾಮ್ ಹೆಚ್ಚಿನ ಕಾಳಜಿ ವಹಿಸುತ್ತದೆ. ಅಫ್ಘಾನಿಸ್ತಾನದ ನೂತನ ಸರಕಾರ ಇಸ್ಲಾಮೀ ಸಿದ್ಧಾಂತಗಳನ್ನು ನಿಷ್ಠೆಯೊಂದಿಗೆ ಪಾಲಿಸುತ್ತಾ ಇಸ್ಲಾಮ್ ಪ್ರತಿಪಾದಿಸುವ ಕ್ಷೇಮ ರಾಷ್ಟ್ರದ ಮಾದರಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆಯನ್ನು ರಾಷ್ಟ್ರಾಧ್ಯಕ್ಷರು ವ್ಯಕ್ತಪಡಿಸಿದರು.
ರಾಷ್ಟ್ರದ ಎಲ್ಲ ನಾಗರಿಕರು ಭಯ ಮತ್ತು ಭಯೋತ್ಪಾದನೆಯಿಂದ ಮುಕ್ತರಾಗಿ ಶಾಂತಿ,ಸಮೃದ್ಧಿಯೊಂದಿಗೆ ಜೀವನ ನಡೆಸಲು ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಖಾತ್ರಿಪಡಿಸಲು ನೂತನ ಸರಕಾರಕ್ಕೆ ಸಾಧ್ಯವಾಗಬೇಕು. ಎಲ್ಲ ಜನ ವಿಭಾಗಗಳನ್ನು ಪ್ರತಿನಿಧಿಸುವ ಇಸ್ಲಾಮಿನ ಪ್ರಜಾಪ್ರಭುತ್ವ ಹಾಗೂ ಸಮಾಲೋಚನಾ ಸಂಪ್ರದಾಯವನ್ನು ಮೈಗೂಡಿಸಿಕೊಂಡು ಜನಪರ ಚುನಾವಣೆಯ ಮುಖಾಂತರ ಅಫ್ಘಾನಿಸ್ತಾನದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರಬಹುದು ಹಾಗೂ ಅಲ್ಲಿಯ ಜನತೆಯಲ್ಲಿ ನೆಲೆನಿಂತಿರುವ ಒಗ್ಗಟ್ಟು ಮತ್ತು ಸ್ಥಿರತೆಯ ಪ್ರತೀಕವಾಗಿ ಪ್ರಸ್ತುತ ಸರಕಾರ ಆದರ್ಶಪ್ರಾಯವಾಗಬಹುದು ಎಂದು ನಾವು ಆಶಿಸುತ್ತೇವೆ. ತಾಲಿಬಾನ್ ಘೋಷಿಸಿದ ಸಾರ್ವತ್ರಿಕ ಕ್ಷಮಾದಾನ, ಸಿಖ್ ಮತ್ತು ಹಿಂದೂ ವಿಭಾಗಗಳನ್ನೊಳಗೊಂಡ ಅಲ್ಪಸಂಖ್ಯಾತರಿಗೆ ನೆಮ್ಮದಿ ಹಾಗೂ ನಿರ್ಭಯತೆಯನ್ನು ಖಾತ್ರಿಪಡಿಸಲಾಗುವುದೆಂಬ ಹೇಳಿಕೆ, ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಮಾತುಕತೆ ಹಾಗೂ ಸಹಕಾರಕ್ಕೆ ಸನ್ನದ್ಧತೆ ವ್ಯಕ್ತಪಡಿಸಿರುವುದು ಶುಭ ಸೂಚನೆಯಾಗಿದೆ. ಆದಾಗ್ಯೂ ನಮ್ಮದೇಶ ಮತ್ತು ಅಫ್ಘಾನಿಸ್ತಾನ ದೀರ್ಘ ಕಾಲದಿಂದ ಉತ್ತಮ ಬಾಂಧವ್ಯವನ್ನು ಹೊಂದಿದೆ. ಸಮೀಪ ಕಾಲದಲ್ಲಿ ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತ ವಿಶೇಷ ಸಹಭಾಗಿತ್ವವನ್ನೂ ಪಡೆದುಕೊಂಡಿದೆ. ಉಭಯ ರಾಷ್ಟ್ರಗಳು ಇನ್ನು ಮುಂದೆಯೂ ಉತ್ತಮ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಅದು ಇನ್ನಷ್ಟು ಬಲಿಷ್ಠಗೊಳ್ಳಬೇಕೆಂದು ಜಮಾಅತ್ ಬಯಸುತ್ತದೆ.
ನೂತನ ಅಫ್ಘಾನ್‌ ಸರಕಾರದೊಂದಿಗೆ ಆರೋಗ್ಯಪೂರ್ಣವಾದ ಸಂಬಂಧ ಬೆಳೆಸುವುದರೊಂದಿಗೆ ಹೊಸ ಅಫ್ಘಾನಿಸ್ತಾನವನ್ನು ಕಟ್ಟಿ ಬೆಳೆಸಲು ಮತ್ತು ಅಭಿವೃದ್ಧಿಗೊಳಿಸಲು ಹಾಗೂ ದಕ್ಷಿಣ ಏಷ್ಯದಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸಲು ಭಾರತಕ್ಕೆ ಹೆಚ್ಚಿನ ಜವಾಬ್ದಾರಿಯಿದೆ ಎಂಬುದನ್ನು ಭಾರತ ಸರಕಾರಕ್ಕೆ ನೆನಪಿಸ ಬಯಸುತ್ತೇವೆ ಎಂದು ಭಾರತ- ಅಫ್ಘಾನಿಸ್ತಾನದ ಸಂಬಂಧದ ಕುರಿತು ಪ್ರಸ್ತಾಪಿಸುತ್ತಾ ಜಮಾಅತ್ ಅಧ್ಯಕ್ಷರು ಹೇಳಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!