ಕೋಳಿ ಸಾಕಾಣಿಕೆಯಿಂದ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಿ: ಸಿಇಓ ತರನ್ನುಮ್

ಕೊಪ್ಪಳ: ಎನ್.ಆರ್.ಇ.ಜಿ ಯೋಜನೆಯಿಂದ ಗ್ರಾಮೀಣ ಮಹಿಳೆಯರು ಕೋಳಿ ಸಾಕಾಣಿಕೆ ಉದ್ಯಮವನ್ನು ಪ್ರಾರಂಭಿಸಿ ಮೊಟ್ಟೆ ಉತ್ಪಾದನೆಯಲ್ಲಿ ತೊಡಗಿಕೊಂಡು ಸ್ವಾವಲಂಬಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.
೨೦೨೨-೨೩ ನೇ ಸಾಲಿನಲ್ಲಿ ವಿಸ್ತರಣಾ ಚಟುವಟಿಕೆಗಳ ಬಲಪಡಿಸುವಿಕೆ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಪಶುಸಂಗೋಪನಾ ಇಲಾಖೆ, ಕೊಪ್ಪಳ ಇವರ ಜಂಟಿ ಸಹಯೋಗದಲ್ಲಿ ಬುಧವಾರದಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಸಂಜೀವಿನಿ ಸ್ವಸಹಾಯ ಗುಂಪುಗಳ ಮಹಿಳಾ ಫಲಾನುಭವಿಗಳಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಕೋಳಿ ಸಾಕಾಣಿಕೆ ಕುರಿತ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಜೀವಿನಿ (ಎನ್.ಆರ್.ಎಲ್.ಎಂ) ಸ್ವ ಸಹಾಯ ಗುಂಪುಗಳ ಮಹಿಳೆಯರಿಗಾಗಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಕೋಳಿ ಸಾಕಾಣಿಯನ್ನು ಎನ್.ಆರ್.ಇ.ಜಿ ಯೋಜನೆಯಡಿ ಪಶುಪಾಲನಾ ಇಲಾಖೆ ಎನ್.ಆರ್.ಎಲ್.ಎಂ ಯೋಜನೆಗಳನ್ನು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಗ್ಗೂಡಿಸಿ ಯೋಜನೆ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ. ಕೋಳಿ ಸಾಕಾಣಿಕೆ ಉದ್ಯಮದಿಂದ ಉತ್ಪಾದನೆಯಾಗುವ ಮೊಟ್ಟೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಅಂಗನವಾಡಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರಾಬರಾಜು ಮಾಡಬಹುದು ಹಾಗೂ ಸ್ಥಳೀಯವಾಗಿ ಮಾರಾಟ ಮಾಡಬಹುದಾಗಿದೆ. ಇಡೀ ರಾಜ್ಯದಲ್ಲಿಯೇ ಈ ಚಟುವಟಿಕೆಯನ್ನು ಮಾದರಿಯಾಗಿ ನಮ್ಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಮತ್ತು ತರಬೇತಿಯ ಲಾಭವನ್ನು ಎಲ್ಲಾ ಶಿಬಿರಾರ್ಥಿಗಳು ಪಡೆದುಕೊಂಡು ಸ್ವಾವಲಂಬಿಗಳಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ರವರು ಮಾತನಾಡಿ, ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಮೊಟ್ಟೆ ಉತ್ಪಾದನೆಯನ್ನು ಮಾಡಿ ಸ್ಥಳೀಯ ಅಂಗನವಾಡಿಗಳಿಗೆ ಹಾಗೂ ಶಾಲೆಗಳಿಗೆ ಪೂರೈಕೆ ಮಾಡಿ ಉತ್ತಮ ಜೀವನೋಪಾಯ ಕಂಡುಕೊಳ್ಳಲು ಸಲಹೆ ನೀಡಿದರು.
ತರಬೇತಿ ಕಾರ್ಯಕ್ರಮದ ಆಯೋಜಕರಾದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ ಹೆಚ್. ಮಾತನಾಡಿ, ತರಬೇತಿ ಕಾರ್ಯಕ್ರಮವು ಎರಡು ದಿನ ನಡೆಯುತ್ತಿದ್ದು, ಮೊದಲನೇ ದಿನ ರಾಜ್ಯದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಕೋಳಿಸಾಕಣಿಕೆ ಕುರಿತು ಸಮಗ್ರವಾಗಿ ತರಬೇತಿ ನೀಡುವರು. ನಾಳೆ ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವಂತಹ ಕೋಳಿ ಸಾಕಣಿಕಾ ಘಟಕಗಳಿಗೆ ಕ್ಷೇತ್ರ ಭೇಟಿ ನೀಡಿ ಪ್ರಯೋಗಿಕ ತರಬೇತಿ ನೀಡಲಾಗುವುದು. ಪಶು ಸಂಗೋಪನೆ ಹಾಗೂ ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಚಟುವಟಿಕೆಯಾಗಿದ್ದು, ಈ ಚಟುವಟಿಕೆಗಳನ್ನು ವೈಜ್ಞಾನಿಕವಾಗಿ ವಾಣಿಜ್ಯ ಮಾದರಿಯಲ್ಲಿ ಕೈಗೊಂಡಲ್ಲಿ ಲಾಭದಾಯಕ ಉದ್ಯಮವನ್ನಾಗಿಸಬಹುದು. ತರಬೇತಿಯನ್ನು ಪಡೆದುಕೊಂಡು ಕೋಳಿ ಸಾಕಾಣಿಕೆ ಕೈಗೊಳ್ಳುವ ಎಲ್ಲಾ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಇಲಾಖೆಯಿಂದ ಎಲ್ಲಾ ಅಗತ್ಯ ತಾಂತ್ರಿಕ ಸೌಲಭ್ಯ ಹಾಗೂ ಸಹಕಾರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಲ್ಲಿಕಾರ್ಜುನ, ಡಾ.ಅಶ್ವತ್ಥ್ ಕುಮಾರ, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ವೀರೇಂದ್ರ ಕುಮಾರ ಕೆ.ಎಂ., ಜಿಲ್ಲಾ ಮಟ್ಟದ ಪಶುಸಂಗೋಪನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಸಂಜೀವಿನಿ ಯೋಜನೆಯ ಜಿಲ್ಲಾ ಹಾಗೂ ತಾಲೂಕ ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಹಾಗೂ ಕೊಪ್ಪಳ ಮತ್ತು ಕುಕನೂರು ತಾಲೂಕಿ ಒಟ್ಟು ೪೦ ಜನ ಸ್ವ ಸಹಾಯ ಗುಂಪಿನ ಸದಸ್ಯರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!