ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ಅರಿವು ಅಗತ್ಯ : ಎಂ.ಸುಂದರೇಶ ಬಾಬುಕೊಪ್ಪಳ : ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ನಗರಾಭಿವೃದ್ದಿಕೋಶ ಇವರ ಸಹಯೋಗದಲ್ಲಿ ೭೫ನೇ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಕೊಪ್ಪಳ ಜಿಲ್ಲೆಗೆ ೨೫ ವರ್ಷಗಳ ಸಂಭ್ರಮ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ೨೦೨೨ರ ಅಂಗವಾಗಿ ತಾಲ್ಲೂಕಿನ ಬಹದ್ದೂರು ಬಂಡಿ ಗ್ರಾಮದ ಕೋಟೆಯಲ್ಲಿ ಮಂಗಳವಾರದಂದು (ಸೆ.೨೭) ಸ್ವಚ್ಛತಾ ಕಾರ್ಯಕ್ರಮ ಮತ್ತು ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾಸೋದ್ಯಮ ದಿನಾಚರಣೆಯಂದು ಆಯಾ ಸ್ಥಳೀಯ ವ್ಯಾಪ್ತಿಯಲ್ಲಿನ ಐತಿಹಾಸಿಕ ಸ್ಮಾರಕಗಳ ಬಗ್ಗೆ ತಿಳುವಳಿಕೆ ನೀಡುವಂತಹ ಕಾರ್ಯಕ್ರಮಗಳು ಆಗಬೇಕು. ಅಂದಾಗ ಮಾತ್ರ ಈ ವರ್ಷದ ಧ್ಯೇಯ ವಾಕ್ಯದಂತೆ “ಪ್ರವಾಸೋದ್ಯಮ ಪುರಾವಲೋಕನ” ಎಂಬ ಸಂದೇಶಕ್ಕೆ ಮಹತ್ವ ಬರುತ್ತದೆ. ಐತಿಹಾಸಿಕ ಸ್ಮಾರಕಗಳ ಸ್ವಚ್ಛತಾ ಕಾರ್ಯಕ್ರಮಗಳು ಶ್ಲಾಘನೀಯವಾಗಿದ್ದು, ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕು.ಕಾವ್ಯರಾಣಿ ಕೆ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸೆ. ೨೬ ರಿಂದ ಅಕ್ಟೋಬರ್ ೦೨ ರವರೆಗೆ ಸ್ವಚ್ಛತಾ ಕಾರ್ಯಕ್ರಮಗಳ ಅಂಗವಾಗಿ ಸೈಕಲ್ ಜಾಥಾ, ಚಿತ್ರಕಲಾ ಸ್ಪರ್ಧೆ, ಪ್ರಭಾತ್ಪೇರಿ, ಸಹಿ ಅಭಿಯಾನ, ಇತರೆ ಕಾಂiiಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ಕೊಪ್ಪಳ ನಗರದಲಿಂದು ಸೈಕಲ್ ಜಾಥಾವನ್ನು ಮಾಡಲಾಗಿದೆ. ಬಹದ್ದೂರು ಬಂಡಿ ಕೋಟೆಯು ಐತಿಹಾಸಿಕ ಸ್ಥಳವಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಎರಡು ದಿನಗಳವರೆಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಮತ್ತು ಗ್ರಾಮ ಪಂಚಾಯತಿಯಿಂದ ಬಹದ್ದೂರ್ ಬಂಡಿ ಗ್ರಾಮದ ಕೋಟೆಯ ಮೇಲ್ಭಾಗದಲ್ಲಿ ಮತ್ತು ಕೆಳ ಭಾಗದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಅವರು ಬಹದ್ದೂರು ಬಂಡಿ ಕೋಟೆಯ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಹೊಲಗೇರಿ ಗ್ರಾಮ ಪಂಚಾಯತ್ ಸದಸ್ಯ ಲೋಕಾನಂದ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹದ್ದೂರ್ ಬಂಡಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ವಹಿಸಿಕೊಂಡಿದ್ದರು. ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಪ್ರವಾಸೋದ್ಯ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ಗ್ರಾಮ ಪಂಚಾಯತ್ ಪಿ.ಡಿ.ಓ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಜಿಲ್ಲಾ ನಗರಾಭಿವೃದ್ದಿಕೋಶದ ಸಿಬ್ಬಂದಿಯವರು, ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು, ಸಾರ್ವಜನಿಕರು, ಶಿಕ್ಷಕರು, ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!