ನರೇಗಾ: ಕೊಪ್ಪಳ ಜಿಲ್ಲೆಗೆ ಒಲಿದ ಶ್ರಮ ಚೇತನ ಪ್ರಶಸ್ತಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಯಕ ಬಂಧುಗಳಾಗಿ ಕೆಲಸ ನಿರ್ವಹಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರಾದ ಶರಣಮ್ಮ ಹಾಗೂ ಹುಲಿಗೆಮ್ಮ ಅವರು ಶ್ರಮ ಚೇತನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮಹಾತ್ಮ ಗಾಂಧಿ ನರೇಗಾ ಮತ್ತು ಗ್ರಾಮೀಣ ಜೀವನೋಪಾಯ ಅಭಿಯಾನ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಉಮಾ ಮಹಾದೇವನ್, ಆಯುಕ್ತರಾದ ಶಿಲ್ಪಾನಾಗ್ ಅವರು, ಶರಣಮ್ಮ ಹಾಗೂ ಹುಲಿಗೆಮ್ಮ ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ, ಗೌರವಿಸಿದರು.
ಜಿಪಂ ಸಿಇಓ ಹರ್ಷ : ನರೇಗಾದಡಿ ದುಡಿಯುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಶ್ರಮ ಚೇತನ ಪ್ರಶಸ್ತಿ ಸಂದಿದ್ದು, ಅವರ ಯಶೋಗಾಥೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿ ಸ್ಫೂರ್ತಿ ನೀಡಿದ್ದು ಸಂತಸ ಮತ್ತು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ ಫಲಾನುಭವಿಗಳಾದ ಶರಣಮ್ಮ ಅವರು ನರೇಗಾ ಯೋಜನೆಯಲ್ಲಿ ಸ್ವಾವಲಂಬನೆ ಜೀವನ ಸಾಗಿಸುವಲ್ಲಿ ಯಶಸ್ವಿಯಾದ ತಮ್ಮ ಅನಿಸಿಕೆಯನ್ನು ಮಾನ್ಯರ ಸಮ್ಮುಖದಲ್ಲಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರಿದ್ದರು.