ಪ್ರೌಢ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಎ.ಐ.ಡಿ.ಎಸ್.ಓ ಪ್ರತಿಭಟನೆ
ಕೊಪ್ಪಳ: ಹಾಲವರ್ತಿ ಗ್ರಾಮದ ಪ್ರೌಢ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್‌ಓ ವತಿಯಿಂದ ವಿದ್ಯಾರ್ಥಿಗಳು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ, ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ಪ್ರೌಢ ಶಾಲೆಯೂ ಆರಂಭವಾಗಿ ಐದಾರು ವರ್ಷಗಳಾದರೂ ಕೂಡ ಈ ಶಾಲೆಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಇಲ್ಲವಾಗಿವೆ. ಶೌಚಾಲಯದ ಸಮಸ್ಯೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ, ಹಾಗೆಯೇ ಶುದ್ಧ ಕುಡಿಯುವ ನೀರು ಇಲ್ಲದೆ ಹತ್ತಿರದಲ್ಲೇ ಸಿಗುವ ಕಲುಷಿತ ನೀರೇ ಗತಿಯಾಗಿದೆ, ಈ ಕಲುಷಿತ ನೀರನ್ನು ಸೇವಿಸುವುದರಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತರಗತಿಗಳಲ್ಲಿ ಫ್ಯಾನ್, ಬಲ್ಬ್ ವ್ಯವಸ್ಥೆ ಇದ್ದರು ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಸ್ಮಾರ್ಟ್ ಕ್ಲಾಸ್ ಇದ್ದರು ಕೂಡ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬಹಳ ವರ್ಷಗಳಿಂದ ಮೇಲಿನ ಸೌಕರ್ಯಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕೊಡಲೇ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಿ ಸೌಕರ್ಯಗಳನ್ನು ಒದಗಿಸಬೇಕೆಂದು ಎಐಡಿಎಸ್‌ಓ ಆಗ್ರಹಿಸುತ್ತದೆ ಎಂದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಐಡಿಎಸ್‌ಓ ವತಿಯಿಂದ ಎಲ್ಲಾ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿಕ್ಷಣಾಧಿಕಾರಿಗಳು ಒಂದು ತಿಂಗಳೊಳಗೆ ಸಮಸ್ಯೆಗಳನ್ನು ಬಗೆಹರಿಸಿ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದರು. ಈ ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಸದಸ್ಯರಾದ ಅಶೋಕ್, ಶಂಕರ್, ಪ್ರದೀಪ್ , ಉಷಾ, ಮನೋಜ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.