ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಪಾವತಿಗೆ ಆದೇಶ

ಕಲಬುರಗಿ: ಕರ್ನಾಟಕ ರಸ್ತೆ ಸಾರಿಗೆ ನೌಕರರ ಮುಷ್ಕರ ಮತ್ತು ಸಹ ಸಿಬ್ಬಂದಿಗಳ ಜೀವ ಬೆದರಿಕೆಯ ಹೊರತಾಗಿ ಕರ್ತವ್ಯಕ್ಕೆ ಹಾಜರಾಗಿ ಬಸ್ ಕಾರ್ಯಾಚರಣೆ ಮಾಡಿ ಸಾರ್ವಜನಿಕ ಸೇವೆಯ ಬದ್ಧತೆ ತೋರಿದ ಸಂಸ್ಥೆಯ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಪಾವತಿಗೆ ಆದೇಶಿಸಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.
ಮುಷ್ಕರಕ್ಕೆ ಪ್ರಚೋದನೆ ಮತ್ತು ಕರ್ತವ್ಯ ನಿರತ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪದ ಮೇಲೆಗೆ ಕೊಪ್ಪಳ ಹಾಗೂ ಕಲಬುರಗಿ ವಿಭಾಗದ ಕೆಲ ಸಿಬ್ಬಂದಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಷ್ಕರದ ನಡುವೆಯೂ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗದಂತೆ ೪೩೬ ಖಾಸಗಿ ಬಸ್, ೨೫೮ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ ೩೨೦೧ ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಸ್ಥೆಯ ಸಿಬ್ಬಂದಿಗಳ ಅನುಕೂಲಕ್ಕಾಗಿ ಕಾರ್ಯನಿರತ ಸ್ಥಳಗಳಲ್ಲಿ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ರವಿವಾರ ಮುಷ್ಕರದಲ್ಲಿ ನಿರತ ಸಿಬ್ಬಂದಿಗಳ ಮನವೊಲಿಸಿದ ಪರಿಣಾಮ ಸಂಸ್ಥೆಯ ಹೊಸಪೇಟೆ ವಿಭಾಗದ ಹಡಗಲಿ ಘಟಕದಲ್ಲಿ ಶೇ.೯೦, ಹಗರಿಬೊಮ್ಮನಳ್ಳಿಯಲ್ಲಿ ಶೇ.೬೨ರಷ್ಟು ವಾಹನಗಳು ರಸ್ತೆಗೆ ಇಳಿದಿವೆ. ಹೊಸಪೇಟೆ ವಿಭಾಗದ ೬ ಘಟಕದಿಂದ ಶೇ.೫೬ರಷ್ಟು ಬಸ್ ಗಳು ಕಾರ್ಯಾಚರಣೆ ನಡೆಸಿವೆ. ಬಳ್ಳಾರಿ ಘಟಕ-೧ರಲ್ಲಿ ಶೇ.೫೩ ಕಾರ್ಯಾಚರಣೆಗೆ ಬಸ್ ರಸ್ತೆಗೆ ಇಳಿದಿವೆ. ಸಂಸ್ಥೆಯ ೯ ವಿಭಾಗದಲ್ಲಿ ಶನಿವಾರ ಶೇ.೧೮ರಷ್ಟು ಬಸ್ ಗಳು ಕಾರ್ಯಾಚರಣೆ ನಡೆಸಿವೆ. ಎಲ್ಲಾ ವಿಭಾಗದಲ್ಲಿ ಸಿಬ್ಬಂದಿ ಸ್ವ-ಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ ಎಂದರು.
೨೨.೫೦ ಕೋಟಿ ರೂ. ಆದಾಯದಲ್ಲಿ ಕೊರತೆ: ಸಾರಿಗೆ ನೌಕರರ ಮುಷ್ಕರದಿಂದ ಸಂಸ್ಥೆಗೆ ಇಲ್ಲಿಯವರೆಗೆ ೨೨.೫೦ ಕೋಟಿ ರೂ. ಆದಾಯದಲ್ಲಿ ಕೊರತೆಯಾಗಿದ್ದು, ಹೀಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಎಂ.ಕೂರ್ಮರಾವ್ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!