ತಾಳಕೇರಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ‘ಕಾನೂನು ಪಾಲನೆ ಎಲ್ಲರ ಜವಾಬ್ದಾರಿ’
ಯಲಬುರ್ಗಾ : ಕಾನೂನು ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ. ಈ ದಿಸೆಯಲ್ಲಿ ಸಂಚಾರ ನಿಯಮಗಳು ಸೇರಿದಂತೆ ಪೊಲೀಸ ಇಲಾಖೆ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಸೂಚಿಸುವ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದು ಮುಖ್ಯ ಎಂದು ಪಿಎಸ್ಐ ಶೀಲಾ ಮೂಗನಗೌಡ್ರ ಹೇಳಿದರು.ತಾಳಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇವೂರು ಪೊಲೀಸ್ ಠಾಣೆಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಪರಿಚಿತರು ಕಂಡು ಬಂದರೆ ಅವರ ಚಲನವಲನ ಬಗ್ಗೆ ನಿಗಾ ವಹಿಸಬೇಕು. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಮಕ್ಕಳ ಅಪಹರಣ ಸೇರಿದಂತೆ ದರೋಡೆ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ವಿದ್ಯಾರ್ಥಿಗಳು ವಾಹನಗಳ ಮೇಲೆ ಕುಳಿತು ಸಂಚಾರ ಮಾಡಬಾರದು ಎಂದು ಸಲಹೆ ನೀಡಿದರು.
ವಾಹನ ಸಂಚಾರ ಮಾಡುವಾಗ ನಿಗದಿತ ವೇಗದಲ್ಲಿ ಸಾಗಬೇಕು. ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕು. ವಾಹನಗಳಲ್ಲಿ ಸಂಚಾರ ಮಾಡುವಾಗ ಅದರ ಸುರಕ್ಷತೆಯ ಬಗ್ಗೆ ಗಮನ ವಹಿಸಬೇಕು. ಇದರಿಂದ ಅಪರಾಧಗಳನ್ನು ತಡೆಯಲು ಸಾಧ್ಯವಿದೆ ಎಂದು ಹೇಳಿದರು.ಬಾಲಕಿಯರಿಗೆ ಯಾರಾದರೂ ಕಿರುಕುಳ ನೀಡಿದರೆ ಅಂತವರು ವಿರುದ್ಧ ಪ್ರಕರಣ ದಾಖಲು ಮಾಡಿ,ಪೊಲೀಸ್ ಠಾಣೆಯಲ್ಲಿ ಭೇಟಿ ನೀಡಿ ನಿಮಗೆ ಯಾವುದೇ ರೀತಿಯ ಅಪರಾಧ ಪ್ರಕರಣಗಳಾಗದಂತೆ ಜಾಗೃತಿ ವಹಿಸಬೇಕು ಎಂದರು.
ಮುಖ್ಯೋಪಾಧ್ಯಾಯ ಬಾಬುಸಾಬ ಲೈನ್ದಾರ, ಶಿಕ್ಷಕರುಗಳಾದ ದೇವೇಂದ್ರ ಜಿರ್ಲಿ ರಮೇಶ ಹೆಚ್, ಸುನೀಲ ಕುಮಾರ, ವೆಂಕಟಲಕ್ಷ್ಮಿ, ಶೋಭಾ ಬಾಗೇವಾಡಿ ಸೇರಿದಂತೆ ಮತ್ತಿತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.