ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನದು ಎನ್ನುವ ಭಾವನೆ ಮೂಡಬೇಕು : ವ.ಚ. ಚನ್ನೆಗೌಡ
ಅಖಿಲ ವಾಣಿ ಸುದ್ದಿ
ಕೊಪ್ಪಳ : ಸಮಸ್ತ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನದು ಎನ್ನುವ ಭಾವನೆ ಮೂಡುವ ವಾತಾವರಣ ನಿರ್ಮಾಣ ಮಾಡುವುದು ನನ್ನ ಆದ್ಯ ಗುರಿಯಾಗಿದೆ, ಎಂದು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ವ.ಚ. ಚನ್ನೆಗೌಡ ಅವರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠೀಯಲ್ಲಿ ಮಾತನಾಡುತ್ತಿದ್ದರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ದಿ. ಮೇ ೯ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ, ೧೯೮೩ ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದೆ . ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷನಾಗಿ ಕರ್ನಾಟಕದಾದ್ಯಂತ ಸಂಚರಿಸುವ ಅವಕಾಶ ದೊರೆಯಿತು . ಈ ತಿರುಗಾಟ ಕನ್ನಡಿಗರ . ಮನೋರಥವನ್ನು ತಿಳಿಯಲು ನೆರವಾಯಿತು . ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ೨೦೧೬ ರಿಂದ ೨೦೨೦ ರ ವರೆಗೆ ೪ ವರ್ಷ ೮ ತಿಂಗಳು ಸೇವೆ ಸಲ್ಲಿಸುವ ಸದವಕಾಶವನ್ನು ಅಧ್ಯಕ್ಷರಾದ ನಾಡೋಜ ಡಾ . ಮನು ಬಳಿಗಾರ್ ಅವರು ಒದಗಿಸಿಕೊಟ್ಟರು . ಅದು ಕನ್ನಡ ಸಾಂಸ್ಕೃತಿಕ ವಲಯದಲ್ಲಿ ನಾನು ಮತ್ತಷ್ಟು ತೊಡಗಿಸಿಕೊಳ್ಳಲು ನೆರವಾಯಿತು . ಕನ್ನಡಿಗರಲ್ಲಿ ನವಜಾಗೃತಿಗೆ ಕಾರಣವಾದ ಐತಿಹಾಸಿಕ ಗೋಕಾಕ್ ಚಳವಳಿಯ ಮೂಲಕ ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ನಾನು ಹಿರಿಯರೊಡಗೂಡಿ ೧೯೮೮ ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಕ್ರಿಯಾ ಸಮಿತಿಯನ್ನು ಸ್ಥಾಪಿಸಿ , ಸಾರಿಗೆ ಸಂಸ್ಥೆಯಲ್ಲಿ ಕನ್ನಡಿಗರಿಗೆ ಉದ್ಯೋಗ , ಆಡಳಿತದಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದೇವೆ . ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ೨೦೦೫ ರಿಂದ ರಾಜ್ಯಾಧ್ಯಕ್ಷನಾಗಿ ಕನ್ನಡ ನಾಡು – ನುಡಿಯ ಸೇವೆ ಸಲ್ಲಿಸುವ ಕೈಂಕರ್ಯದಲ್ಲಿ ನಿರತನಾಗಿದ್ದೇನೆ . ಈ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಡಳಿತ ವರ್ಗದ ಮನವೊಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೨೦೦೭ ರಲ್ಲೇ ೧೫ ಕೋಟಿ ರೂ.ಗಳ ದತ್ತಿ ಸ್ಥಾಪಿಸಿ ಏಳು ಲಕ್ಷದ ಒಂದು ರೂ . ಮೊತ್ತದ ದೇಶದಲ್ಲೇ ದೊಡ್ಡ ಸಾಹಿತ್ಯ ಪ್ರಶಸ್ತಿಯೆನಿಸಿರುವ ” ಬೆಂ.ಮ.ಸಾ.ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಪ್ರತಿ ವರ್ಷ ನಾಡಿನ ಹಿರಿಯ ಸಾಹಿತಿಯೊಬ್ಬರಿಗೆ ನೀಡುವಂತೆ ಮಾಡಿರುವೆ . ಇದೆ ಸಂದರ್ಭದಲ್ಲಿ ೪೫ ವರ್ಷದೊಳಗಿನ ಐವರು ಯುವ ಬರಹಗಾರರಿಗೆ ೨೫ ಸಾವಿರ ರೂ.ಗಳ ನಗದು ಪುರಸ್ಕಾರದೊಂದಿಗೆ “ ಮಯೂರ ವರ್ಮ ” ಪ್ರಶಸ್ತಿ ನೀಡಲಾಗುತ್ತಿದೆ . ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ಪ್ರತಿ ವರ್ಷ ಕನ್ನಡಪರ ಹೋರಾಟ ನಡೆಸುತ್ತಿರುವ ಹಿರಿಯರಿಗೆ “ ಕರ್ನಾಟಕ ಚೂಡಾಮಣಿ ’ ಪ್ರಶಸ್ತಿ , ರಂಗ ಕಲಾವಿದರಿಗೆ “ ಡಾ . ರಾಜ್ ಕುಮಾರ್ ರಂಗ ” ಪ್ರಶಸ್ತಿ , ಕನ್ನಡ ನಾಡು – ನುಡಿ ಕುರಿತು ರಚಿತವಾದ ಕೃತಿಕಾರರಿಗೆ “ ರಾಮಜಾಧವ ಗ್ರಂಥ ಪುರಸ್ಕಾರ’ವನ್ನು ನೀಡಲಾಗುತ್ತಿದೆ . ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಬಂದ ಗೌರವ ಧನ ಏಳು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ’ ಕನ್ನಡ ಕಾಯಕ ದತ್ತಿ ’ ಪ್ರಶಸ್ತಿ ಸ್ಥಾಪಿಸಿ ೧. ಕನ್ನಡ ಪರ ಹೋರಾಟಗಾರರಿಗೆ ೨ , ಕನ್ನಡ ನಾಡು – ನುಡಿ ಕುರಿತು ರಚಿತವಾದ ಕೃತಿಕಾರರಿಗೆ ೩. ಕನ್ನಡ ರಂಗಭೂಮಿ ಕಲಾವಿದರಿಗೆ ತಲಾ ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಪ್ರತಿವರ್ಷ ನೀಡುವಂತೆ ಮಾಡಿರುವ ನಾಡು – ನುಡಿ ಕುರಿತ ನಾಲ್ಕು ಕೃತಿಗಳನ್ನು ಹೊರತಂದಿದ್ದೇನೆ .
ನನ್ನ ಈ ಎಲ್ಲ ಅನುಭವವನ್ನು ಬಳಸಿಕೊಂಡು ಸರ್ವ ಸದಸ್ಯರುಗಳ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಇನ್ನಷ್ಟು ವ್ಯಾಪಕ ನೆಲೆಯಲ್ಲಿ ಕನ್ನಡ ಕಾಯಕ ಮಾಡುವ ಆಶಯ ಹೊಂದಿದ್ದೇನೆ,
ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಚುನಾವಣೆ -೨೦೨೧ . ಕಾರ್ಯ ಯೋಜನೆಗಳು
೧.ಶಾಶ್ವತ ನಿಘಂಟು ವಿಭಾಗ ಸ್ಥಾಪನೆ ( ನಿಘಂಟಿನ ಪರಿಷ್ಕರಣ ನಿರಂತರವಾಗಿ ನಡೆಯುವಂತೆ ಮಾಡಲು ) ೨. ಮಹತ್ವದ ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸುವುದು . ೩.ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದು, ಪುಸ್ತಕ ಖರೀದಿ ಸೇರಿದಂತೆ ಪರಿಷತ್ತಿನ ಎಲ್ಲ ಚಟುವಟಿಕೆಗಳು ಅಂತರ್ಜಾಲ ( ಆನ್ಲೈನ್ ) ದ ಮೂಲಕ ನಡೆಯುವಂತೆ ಮಾಡುವುದು ಇನ್ನು ಅನೇಕ ಕಾರ್ಯ ಯೋಜನೆಗಳು ಕಾರ್ಯರೂಪಕ್ಕೆ ತರುತ್ತೇನೆ, ದಯಮಾಡಿ ನನ್ನ ಗೆಲುವಿಗೆ ಆಶೀರ್ವದಿಸಬೇಕು ಎಂದು ಎಲ್ಲಾ ಸಾಹಿತಿಗಳಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ಕನ್ನಡಿಗರ ರಾಜ್ಯಾಧ್ಯಕ್ಷ ರಾಜು ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.